ಕನ್ನಡಪ್ರಭ ವಾರ್ತೆ ಬೀಳಗಿ
ತಾಲೂಕಿನ ಪ್ರಸಿದ್ಧ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ವೃದ್ಧೆಯೊಬ್ಬರ ಭೀಕರ ಕೊಲೆ ನಡೆದು ನಾಲ್ಕು ತಿಂಗಳಾದರೂ, ಪೊಲೀಸರು ಇದುವರೆಗೆ ಯಾವುದೇ ಆರೋಪಿಯನ್ನು ಬಂಧಿಸದೆ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಬೀರೇಶ್ವರ ಜಾತ್ರಾ ಕಮಿಟಿ ಹಾಗೂ ಕಾಟಕರ ಓಣಿಯ ಹಿರಿಯರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಮನವಿ ಸಲ್ಲಿಸಿದರು.
ಕಳೆದ 2 ವರ್ಷಗಳಿಂದ ಬೀರೇಶ್ವರ ದೇವಸ್ಥಾನದಲ್ಲಿ ರಾತ್ರಿ ಮಲಗುತ್ತಿದ್ದ ಗೌರವ್ವ ಅಯ್ಯಪ್ಪ ಕೊಡೇಕಲ್ ಎಂಬ ವೃದ್ಧೆಯನ್ನು, ಮಾರ್ಚ್ 17ರಂದು ರಾತ್ರಿ ಕಿಡಿಗೇಡಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದರು. ಮರುದಿನ ಅಂದರೆ 18-03-2026ರ ಯುಗಾದಿ ಪಾಡ್ಯದಂದು ಬೆಳಗ್ಗೆ 6ಗಂಟೆಗೆ ಪೂಜಾರಿ ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿತ್ತು. ತಕ್ಷಣವೇ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದರು.ಕೊಲೆ ನಡೆದು 4 ತಿಂಗಲಾದರೂ ಬೀಳಗಿ ಪೊಲೀಸರು ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಇಲಾಖೆಯ ಈ ಮಂದಗತಿ ಹಾಗೂ ಬೇಜವಾಬ್ದಾರಿತನದಿಂದಾಗಿ ಬೀಳಗಿಯ ಸಾರ್ವಜನಿಕರಲ್ಲಿ ಹಾಗೂ ಭಕ್ತರಲ್ಲಿ ಭೀತಿ ಮತ್ತು ಅಭದ್ರತೆಯ ವಾತಾವರಣ ನಿರ್ಮಾಣವಾಗಿದೆ.
ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮುಂಬರುವ 15 ದಿನಗಳೊಳಗಾಗಿ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಬಾಗಲಕೋಟೆ ಎಸ್ಪಿ ಕಚೇರಿ ಎದುರು ಬೃಹತ್ ಹೋರಾಟ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಸಿದೆ.