ಮಾದನಹಿಪ್ಪರಗಾದಿಂದ ಆಳಂದವರೆಗೆ ಯಾತ್ರೆಗೆ ಮಾಜಿ ಸಂಸದ ಡಾ. ಉಮೇಶ ಜಾಧವ್ ಚಾಲನೆಕನ್ನಡಪ್ರಭ ವಾರ್ತೆ ಆಳಂದ ಸ್ಥಳೀಯ ಕ್ಷೇತ್ರದ ಶಾಸಕರು ಭ್ರಷ್ಟಾಚಾರ ಹಾಗೂ ಪಕ್ಷಪಾತ ನಡೆಸಿದ್ದಾರೆ ಎಂದು ಆರೋಪಿಸಿ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ಘಟಕವು ಮಾದನಹಿಪ್ಪರಗಾದಿಂದ ಆಳಂದ ವರೆಗೆ ನಡೆಯುವ ಎರಡು ದಿನದ ಜನಾಕ್ರೋಶ ಪಾದಯಾತ್ರೆಗೆ ಮಾಜಿ ಸಂಸದ ಡಾ. ಉಮೇಶ ಜಾಧವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಧವ್ ಅವರು, ರಾಜ್ಯ ಸರ್ಕಾರ ಬಾಳೆ ಹಣ್ಣಿನ ರಾಜಕೀಯ ಮಾಡುತ್ತಿದೆ. ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಕೈಗೊಳ್ಳಲಿರುವ ಜನಾಕ್ರೋಶ ಯಾತ್ರೆಯು ಹರ್ಷಾನಂದ ಗುತ್ತೇದಾರ ಕೈಗೊಂಡಿರುವ ಹೋರಾಟದ ಮಾದರಿಯಾಗಲಿದೆ. ಕೇಂದ್ರ ಸರ್ಕಾರದ ಅನೇಕ ಜನಪರ ಯೋಜನೆಗಳ ಲಾಭ ಪಡೆದುಕೊಳ್ಳಬೆಕು. ರಾಜ್ಯ ಸರ್ಕಾರ ಜನ ಸಾಮಾನ್ಯರಿಗೆ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿರುವುದರ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಡಾ. ಅಂಬೇಡ್ಕರ್ ಅವರಿಗೆ ಅತಿಯಾದ ನೋವು ಕೊಟ್ಟ ಪಕ್ಷವೇ ಕಾಂಗ್ರೆಸ್. ಅಮಿತ್ ಶಾ ಅವರ ಪೂರ್ಣಭಾಷಣ ಕೇಳದೆ, 12 ನಿಮಿಷದ ಭಾಷಣವನ್ನು ತಿರುಚಿ ಬಂಡವಾಳ ಮಾಡಿದ್ದಾರೆ. ಇಂಥವುಗಳಿಗೆ ಜನ ಕಿವಿಗೊಡಬಾರದು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಜಿಲ್ಲೆಯ 8 ಕ್ಷೇತ್ರಗಳಲ್ಲಿನ ಶಾಸಕರು ಸಚಿವರ ಭ್ರಷ್ಟಾಚಾರ ಖಂಡಿಸಿ ಜಿಲ್ಲೆಯಾದ್ಯಂತ ಜನಾಕ್ರೋಶ ಪಾದಯಾತ್ರೆ ಕೈಗೊಳ್ಳಲು ಆಳಂದ ಹರ್ಷಾನಂದ ಗುತ್ತೇದಾರ ಯಾತ್ರೆ ಸ್ಫೂರ್ತಿಯಾಗಲಿದೆ ಎಂದರು. ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಮಾತನಾಡಿ, ಶಾಸಕ ಬಿ.ಆರ್. ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಧಿಕಾರಿಗಳಿಗೆ ಹೆದರಿಕೆಗಾದರು ಸಲಹೆಗಾರ ಸ್ಥಾನವಿರಲಿ ಎಂದು ಅಧಿಕಾರಿಗಳಿಗೆ ಹೆದರಿಕೆ ಹಾಕುತ್ತಿದ್ದಾರೆ. ಗ್ರಾಪಂಗಳಲ್ಲಿ ಇಲಾಖೆಗಳಲ್ಲಿ ಹಸ್ತಕ್ಷೇಪಮಾಡಿ ದುರಾಡಳಿತ ನಡೆಸಿದ್ದಾರೆ. ಅಂಗನವಾಡಿಗಳಿಗೆ ಮೊಟ್ಟೆ ವಿತರಿಸದೇ ₹5 ಕೋಟಿ ನುಂಗಿಹಾಕಿದ್ದಾರೆ. ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿಗಳ ನಡೆಸಿದ ಹೋರಾಟಗಾರ ಮೇಲೆ ಸರ್ಕಾರ ಲಾಠಿಚಾರ್ಜ್ ಮಾಡಿದರೂ ಧ್ವನಿ ಎತ್ತದೆ ಲಿಂಗಾಯತರ ವಿರುದ್ಧವೇ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿದರು. ಹರ್ಷಾನಂದ ಗುತ್ತೇದಾರ ಅವರು, ನಾಳೆ ಆಗಮಿಸಲಿರುವ ವಿಧಾನಪರಿಷತ್ತ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಅವರಿಗೆ ಇಲ್ಲಿನ ಶಾಸಕರ ಭ್ರಷ್ಟಾಚಾರ ದುರಾಡಳಿತ ಕುರಿತಾಗಿ ಧ್ವನಿ ಎತ್ತಲು ದಾಖಲೆಗಳನ್ನು ನೀಡಲಾಗುವುದು ಎಂದು ಹೇಳಿದರು. ಬಳಿಕ ನಡೆದ ಜನಾಕ್ರೋಶ ಪಾದಯಾತ್ರೆಯಲ್ಲಿ ಹರ್ಷಾನಂದ ಜೊತೆ ಹಲವು ಗ್ರಾಮಗಳ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕಿ ಶಾಸಕರ ವಿರುದ್ಧ ಘೋಷಣೆ ಕೂಗುತ್ತಾ ಸಾಗಿ ಸಂಜೆ ಜಿಡಗಾ ಗ್ರಾಮದಲ್ಲಿ ವಾಸ್ತವ್ಯ ಕೈಗೊಂಡು ಆಳಂದ ಪಟ್ಟಣಕ್ಕೆ ಆಗಮಿಸಿ ಬಸ್ ನಿಲ್ದಾಣ ಬಳಿ ಬೃಹತ್ ಸಭೆ ನಡೆಸಲಿದೆ. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.