ಕನ್ನಡಪ್ರಭ ವಾರ್ತೆ ಅರಸೀಕೆರೆ
ಪತ್ರಕರ್ತರ ದಿನಾಚರಣೆಯನ್ನು ಪತ್ರಕರ್ತರು ಕೂಡಿ ಆಚರಿಸುವುದಕ್ಕಿಂತ ಸಾರ್ವಜನಿಕರು ಒಟ್ಟಿಗೆ ಸಮಾಜಮುಖಿ ಚಿಂತನೆಯೊಂದಿಗೆ ಆಚರಿಸುವುದರಿಂದ ಆಚರಣೆಗೆ ಹೆಚ್ಚಿನ ಮಹತ್ವ ಬರುತ್ತದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.ಪತ್ರಕರ್ತರ ದಿನಾಚರಣೆ ಕಾರ್ಯಕ್ರಮವು ಪತ್ರಕರ್ತರ ಕುಂದುಕೊರತೆ, ನೋವು,ನಲಿವು ಆಲಿಸುವ ವೇದಿಕೆಯಾಗುವುದರೊಂದಿಗೆ ಸಮಾಜಮುಖಿ ಚಿಂತನೆಗೆ ನಿಲುವು ತಾಳುವ ಹಾಗೂ ಪತ್ರಕರ್ತರ ಸಂಘದಿಂದ ಸಮಾಜಕ್ಕೆ ನೀಡಬಹುದಾದ ಕೊಡುಗೆಗಳನ್ನು ಸಾರ್ವಜನಿಕರೊಂದಿಗೆ ಸೇರಿ ಚಿಂತನ ಮಂಥನ ನಡೆಸಿದಾಗ ಮಾತ್ರ ನಾವು ಆಚರಿಸುವ ಪತ್ರಕರ್ತರ ದಿನಾಚರಣೆಯ ಮಹತ್ವ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಆಲೋಚಿಸುವಂತೆ ಕರೆ ನೀಡಿದರು.
ಈಗಾಗಲೇ ಕೆಲವು ಜಿಲ್ಲೆ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತಮ್ಮ ವ್ಯಾಪ್ತಿಯಲ್ಲಿ ಆರೋಗ್ಯ ಪರಿಸರ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ಜನಪದ ಕಾರ್ಯನಿರ್ವಹಿಸುವ ಮೂಲಕ ಇತರೆ ಸಂಘಸಂಸ್ಥೆಗಳಿಗೆ ಮಾದರಿಯಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ರಾಜ್ಯಾದ್ಯಂತ ಇರುವ ಕಾರ್ಯನಿರತ ಪತ್ರಕರ್ತರ ಸಂಘ ಜುಲೈ ತಿಂಗಳಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದ್ದು ಪ್ರಸ್ತುತ ವರ್ಷದಿಂದಲೇ ಸಾರ್ವಜನಿಕರು ಸೇರಿದಂತೆ ಶಾಸಕಾಂಗ ನ್ಯಾಯಾಂಗ ಹಾಗೂ ಕಾರ್ಯಾಂಗದ ಮುಖಂಡರನ್ನು ಒಳಗೊಂಡಿದಂತೆ ಪತ್ರಕರ್ತರ ದಿನಾಚರಣೆಯ ಆಚರಿಸಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿ ಮಂಡಳಿಯ ನಿರ್ದೇಶಕರಾದ ಟಿ ಆನಂದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿಗಳಾದ ಹೇಮಂತ್ ಕುಮಾರ್, ರಂಗನಾಥ್, ಖಜಾಂಚಿ ಮುರುಂಡಿ ಪ್ರಸಾದ್, ರಾಘವೇಂದ್ರ ಮಾಲೀಕರಾದ ರಾಘು, ಪತ್ರಕರ್ತರಾದ ಆನಂದ್ ಕೌಶಿಕ, ಟಿ ಎಸ್ ಸ್ವಾಮಿ, ನವೀನ್ ಕುಮಾರ್, ಜಗದೀಶ್, ಜಿಲ್ಲಾ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ವೆಂಕಟೇಶ್, ನಾರಾಯಣ್ ಉಪಸ್ಥಿತರಿದ್ದರು.