ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಂಗಳೂರಿನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ರಸಗೊಬ್ಬರ ಸಾಗಣೆ ಮಾಡಿದ ಗೂಡ್ಸ್ ರೈಲಿಗೆ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಸ್ವಾಗತಿಸಿ ಪೂಜೆ ಸಲ್ಲಿಸಿದರು.ನಗರದ ರೈಲ್ವೆ ನಿಲ್ದಾಣಕ್ಕೆ ಮಂಗಳೂರಿನಿಂದ 10 ಬೋಗಿಗಳಲ್ಲಿ ರಸಗೊಬ್ಬರ ತುಂಬಿಕೊಂಡು ಬಂದಿದ್ದ ಗೂಡ್ಸ್ ರೈಲಿಗೆ ರಸಗೊಬ್ಬರ ಮಾರಾಟಗಾರರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ರೈಲ್ವೆ ಸಮಿತಿ ಸದಸ್ಯ ವಿ.ಪ್ರಭಾಕರ್ ಮಾತನಾಡಿ, ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆಂಬ ಒಳ್ಳೆಯ ಉದ್ದೇಶದಿಂದ ರೈಲ್ವೆ ವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪಡಿತರ ಮಾತ್ರ ಸಾಗಣೆ ಮಾಡುತ್ತೀರಿ, ರಸಗೊಬ್ಬರ ಸಾಗಣೆ ಏಕೆ ಮಾಡುತ್ತಿಲ್ಲ ಎಂದು ಗಮನ ಸೆಳೆದ ಪರಿಣಾಮದಿಂದ ಇಂದು ರಸಗೊಬ್ಬರ ಸಾಗಣೆ ಆಗಿದ್ದು, ಇನ್ನೂ ಮುಂದೆ ನಿರಂತರವಾಗಿ ರಸಗೊಬ್ಬರ ಸಾಗಣೆ ಮಾಡುತ್ತಾರೆ. ಲಾరి ಮಾಲೀಕರು, ಕಾರ್ಮಿಕರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬಂದರೆ ಹೆಚ್ಚಿನ ಬೋಗಿಗಳು, ರೈಲು ಕೇಳಬಹುದು. ಜಿಲ್ಲೆಯಿಂದ ರೈಲು ಇಲಾಖೆಗೆ ಆದಾಯ ಕಡಿಮೆ ಇದೆ. ಜಿಲ್ಲೆಗೆ ಹೆಚ್ಚಿನ ಸಾಗಣಿಕೆ ತರಿಸಿದರೆ ಆದಾಯ ಬರುತ್ತದೆ. ಆಗ ಇತರೆ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಮೈಸೂರು ಇನ್ನಿತರ ಕಡೆ ಹೊಸ ರೈಲು ಸಂಚಾರ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಏನಾದರೂ ರೈಲ್ವೆ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಸರಿಪಡಿಸಲಾಗುವುದು ಎಂದರು.ಪೂಜೆ ಸಲ್ಲಿಸಿದ ರಸಗೊಬ್ಬರ ಮಾರಾಟಗಾರ ಸಂಘದ ಅಧ್ಯಕ್ಷ ಯೋಗರಾಜ್ ಮಾತನಾಡಿ, ಇಂದು ಮಂಗಳೂರನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ಗೂಡ್ಸ್ ರೈಲು ಮೂಲಕ ರಸಗೊಬ್ಬರ ತಂದಿರುವುದು ತುಂಬಾ ಖುಷಿಯಾಗಿದೆ. ಇದು ರೈತರು ಜಿಲ್ಲೆಯ ರಸಗೊಬ್ಬರ ಮಾರಾಟಗಾರರಿಗೆ ಅನುಕೂಲವಾಗಿದೆ. ಹಿಂದೆ ಮೈಸೂರಿನಿಂದ ಲಾರಿಯಲ್ಲಿ ರಸಗೊಬ್ಬರ ತರಬೇಕಾಗಿತ್ತು. ಅದರಿಂದ ಸಾಗಣಿಕೆ ವೆಚ್ಚ, ಸಮಯ ವ್ಯಯವಾಗಿ ಮಾರಾಟಗಾರರಿಗೆ ಹೊರೆಯಾಗುತ್ತಿತ್ತು ಮತ್ತು ರಸಗೊಬ್ಬರ ಕೊರತೆ ಎದುರಾಗುತ್ತಿತ್ತು. ಗೂಡ್ಸ್ ರೈಲ್ವೆಯ ಮುಖಾಂತರ ರಸಗೊಬ್ಬರ ಸಾಗಣೆ ಮಾಡಿದ್ದರಿಂದ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಈ ಮೂಲಕ ಅಭಿನಂದಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಎಂಸಿಎಫ್ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್, ಲಾಜಿಸ್ಟಿಕ್ ಯೆರಿಸ್ವಾಮಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಯಾವುಲ್ಲಾ, ಕಾರ್ಮಿಕರ ಸಂಘ ದ ಆನಂದ್, ಡೀಲರ್ಸ್ ಗಳಾದ ರವಿ, ಮಹೇಶ, ಬಾಬು, ವೇಣು,ಪ್ರಸಾದ್ ಕೂಲಿಕಾರ್ಮಿಕರು, ಡೀಲರ್ಸ್‌ಗಳು ಹಾಜರಿದ್ದರು.