ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಸಾಧಕ-ಬಾಧಕ ಕುರಿತು ಕರೆದ ವಿವಿಧ ಪರಿಸರ ಸಂಘಟನೆಗಳ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಜಗತ್ತಿನ ಎಂಟು ಜೀವ ವೈವಿಧ್ಯ ತಾಣಗಳಲ್ಲಿ ಶರಾವತಿ ಯೋಜನಾ ಪ್ರದೇಶವಿರುವ ಪಶ್ಚಿಮಘಟ್ಟ ಪ್ರಮುಖವಾಗಿದ್ದು, ಈ ಪ್ರದೇಶದಲ್ಲಿ ಪ್ರಸ್ತಾವಿತ ಯೋಜನೆ ಬೇಡವೇ ಬೇಡ ಎಂಬ ಒತ್ತಾಯ ಉಭಯ ಜಿಲ್ಲೆಗಳ ಜನರದ್ದಾಗಿದೆ. ದಕ್ಷಿಣ ಭಾರತದಲ್ಲಿ ಹರಿಯುವ ಎಲ್ಲಾ ನದಿಗಳ ಉಗಮಸ್ಥಾನ ಪಶ್ಚಿಮಘಟ್ಟವಾಗಿದ್ದು, ಈಗಾಗಲೇ ಪಶ್ಚಿಮಘಟ್ಟದ ನಾಶವಾಗಿದೆ. ಈ ರೀತಿ ಹಾಳು ಮಾಡುತ್ತಾ ಹೋದರೆ ಇಡೀ ಜಗತ್ತಿಗೆ ಕಂಠಕ ಎದುರಾಗಲಿದೆ ಎಂಬ ಎಚ್ಚರಿಕೆ ನೀಡಿದರು.
ಈ ಯೋಜನೆಯಿಂದ ಕೇವಲ ೫೪ ಹೆಕ್ಟೇರ್ ಅರಣ್ಯ ನಾಶವಾಗಲಿದೆ. ಕೇವಲ 16 ಸಾವಿರ ಮರಗಳನ್ನು ಕಡಿಯಲಾಗುವುದು ಎಂಬ ಕೆಪಿಸಿಎಲ್‌ನ ಹೇಳಿಕೆ ಸಂಪೂರ್ಣ ಸುಳ್ಳು. ಈಗಾಗಲೇ ಶರಾವತಿ ಕಣಿವೆಯಲ್ಲಿ 18 ಸಾವಿರ ಎಕರೆ ಅರಣ್ಯ ನಾಶವಾಗಿದೆ. ಗೇರುಸೊಪ್ಪ ಜಲಾಶಯ ನಿರ್ಮಾಣಕ್ಕೆ 600 ಹೆಕ್ಟೇರ್ ಅರಣ್ಯ ನಾಶವಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳಲ್ಲೊಬ್ಬರಾದ ಪ್ರಣೀತಪೌಲ್ ಎಂಬುವವರು ಈ ಪ್ರದೇಶದ ಅಧ್ಯಯನ ಮಾಡಿ ಇಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ಸಿಂಗಳಿಕಗಳಿವೆ. ಅತ್ಯಂತ ವಿನಾಶದ ಅಂಚಿನಲ್ಲಿರುವ ಮಂಗಟ್ಟೆ ಹಕ್ಕಿಗಳಿವೆ. ಇಂತಹ ಸೂಕ್ಷ್ಮಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಕೂಡದು ಎಂದು ಅವರು ವರದಿ ನೀಡಿದ್ದಾರೆ. ಆದರೆ, ಆ ವರದಿಯನ್ನು ಕೆಪಿಸಿಎಲ್ ಪರಿಗಣಿಸದೆ ಮಾರಕ ಯೋಜನೆಗೆ ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದರು.ಅರಣ್ಯನಾಶದ ಬದಲಾಗಿ ಬ್ಯಾಟರಿ ಎನರ್ಜಿ, ಅಸಂಪ್ರದಾಯ ಇಂಧನ ಬಳಸಿ ವಿದ್ಯುತ್ತನ್ನು ಉತ್ಪಾದಿಸುವತ್ತ ಕೆಪಿಸಿಎಲ್ ಗಮನಹರಿಸಬೇಕು. ಅವರು ಹೇಳಿರುವ ಹಾಗೆ ರಾಜ್ಯದ ಏಳು ಬೇರೆ ಬೇರೆ ಸ್ಥಳಗಳಲ್ಲಿರುವ ಬ್ಯಾಟರಿ ಎನರ್ಜಿ ಕೇಂದ್ರಗಳಲ್ಲಿ ಇದಕ್ಕೆ ಬೇಕಾಗುವ ಯಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಈಗಾಗಲೇ ಐದು ಗಿಗಾಮೆಗಾವ್ಯಾಟ್ ಬ್ಯಾಟರಿ ಎನರ್ಜಿ ಉತ್ಪಾದನಾ ಕೇಂದ್ರದ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೆರವೇರಿಸಿದ್ದಾರೆ. ಅದರಂತೆ ವಿದ್ಯುತ್ ಉತ್ಪಾದನೆಗೆ ಅರಣ್ಯನಾಶ ಬಿಟ್ಟು ಅನ್ಯ ಮಾರ್ಗವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್, ರಾಷ್ಟ್ರಭಕ್ತರ ಬಳಗದ ಕೆ.ಎಸ್. ಈಶ್ವರಪ್ಪ, ಕೆ.ಇ.ಕಾಂತೇಶ್, ಈ.ವಿಶ್ವಾಸ್, ಮೋಹನ್ ಜಾದವ್, ಪ್ರಮುಖರಾದ ಶೇಖರ್ ಗೌಳೇರ್, ಗಿರೀಶ್‌ಪಟೇಲ್, ರಮೇಶ್‌ಬಾಬು, ಕೆಪಿಸಿಎಲ್ ಅಧಿಕಾರಿಗಳಾದ ವಿಜಯ್ ಮೊದಲಾದವರಿದ್ದರು.
ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ರಾಷ್ಟ್ರ ಭಕ್ತರ ಬಳಗವು ವಿವಿಧ ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಫೆ.12ರಂದು ಬೆಳಗ್ಗೆ 10 ಗಂಟೆಗೆ ಗೋಪಿ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.