ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ ಕಾಮಗಾರಿ ಮರುಜೀವ

KannadaprabhaNewsNetwork |  
Published : Oct 27, 2024, 02:18 AM IST
ರಸ್ತೆ | Kannada Prabha

ಸಾರಾಂಶ

ಇದೀಗ ರಸ್ತೆಯ ಇನ್ನೊಂದು ಭಾಗಕ್ಕೆ ಡಾಂಬರೀಕರಣ ನಡೆಸಲು ಜಲ್ಲಿ, ಕಾಂಕ್ರೀಟ್ ಮಿಶ್ರಣವನ್ನು ಹಾಕುವ ಕೆಲಸ ಭರದಿಂದ ನಡೆಯುತ್ತಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಜೀವ ಸಿಕ್ಕಿದೆ. ಪ್ರದೇಶದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಡಾಮರೀಕರಣ ಹಾಗೂ ಉಳಿದ ಕೆಲಸಗಳು ತ್ವರಿತವಾಗಿ ಸಾಗುವ ಭರವಸೆ ವಾಹನ ಸವಾರರಲ್ಲಿ ಮೂಡಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ 35 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ಮೇ ತಿಂಗಳಲ್ಲಿ ಮಳೆ ಆರಂಭವಾದೊಡನೆ ನನೆಗುದಿಗೆ ಬಿದ್ದಿತ್ತು. ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆ ಒಂದು ವಾರದಿಂದ ಕಾಮಗಾರಿ ಮತ್ತೆ ಮರು ಜೀವ ಪಡೆದಿದೆ. ಸುಮಾರು 700 ಕೋಟಿ ರುಪಾಯಿ ಅನುದಾನದ ಈ ಯೋಜನೆಯ ಕಾಮಗಾರಿಯನ್ನು ನಾಗಪುರದ ಡಿ.ಪಿ.ಜೈನ್ ಕಂಪನಿ ಗುತ್ತಿಗೆ ಪಡೆದಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಕಾಮಗಾರಿ ಆರಂಭಿಸಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆಯನ್ನು ಅಗೆದು ಹಾಕಿ, ಕೆಲವು ಕಡೆ ಅರ್ಧಂಬರ್ಧ ಡಾಂಬರೀಕರಣ, ಅವ್ಯವಸ್ಥಿತ ಚರಂಡಿ ನಿರ್ಮಾಣ ಇತ್ಯಾದಿ ಬಿಟ್ಟರೆ ಹೆಚ್ಚಿನ ಕೆಲಸ ನಡೆದಿರಲಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಮದ್ದಡ್ಕ, ಉಜಿರೆ, ಕಾಶಿಬೆಟ್ಟು, ಕಲ್ಮಂಜ, ಸೋಮಂತಡ್ಕ ಮುಂಡಾಜೆ ಸೇರಿದಂತೆ ವಿವಿಧೆಡೆ ಸಂಚರಿಸುವುದು ಸಾಹಸದ ಕೆಲಸವಾಗಿತ್ತು.

ಬಸ್‌ಗಳು ಹೂತು ಹೋಗುವಷ್ಟು ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಹೈರಾಣರಾಗಿದ್ದರು. ಈ ಸ್ಥಳಗಳಲ್ಲಿ ಕಂಪನಿ ವತಿಯಿಂದ ಆಗಾಗ ಕೆಸರು ತೆಗೆಯುವ, ಜಲ್ಲಿ ಹಾಕುವ ಕಾರ್ಯ ನಡೆಯುತ್ತಿದ್ದರೂ ಅದು ನೀರಿನಲ್ಲಿ ಮಾಡಿದ ಹೋಮದಂತಾಗುತ್ತಿತ್ತು. ಇದರಿಂದ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಸಂಚರಿಸುವ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸುವಂತಾಗಿತ್ತು.

ಒಳಗುತ್ತಿಗೆ: ಡಿ.ಪಿ. ಜೈನ್ ಕಂಪನಿ ಸುಮಾರು ಎರಡೂವರೆ ತಿಂಗಳ ಹಿಂದೆ ಮುಗ್ರೋಡಿ ಕನ್‌ಸ್ಟ್ರಕ್ಷನ್‌ಗೆ ಒಳಗುತ್ತಿಗೆ ನೀಡಿತ್ತು. ಬಳಿಕ ಮುಗ್ರೋಡಿ ಕನ್‌ಸ್ಟ್ರಕ್ಷನ್‌ ಮಳೆಗಾಲದಲ್ಲಿ ರಸ್ತೆ ಹಾಳಾದ ಕಡೆ ಚರಲ್ ಹಾಕುವ, ಕೆಸರು ತೆಗೆಯುವ, ರಸ್ತೆ ಬದಿಯ ಚರಂಡಿ ಹೂಳೆತ್ತುವ ಮೊದಲಾದ ಕೆಲಸಗಳನ್ನು ಮಾಡಿ ಒಂದಿಷ್ಟು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿತ್ತು. ರಸ್ತೆ ಹಾಳಾದ ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿತ್ತು.

ಕಾಮಗಾರಿ ಮರು ಆರಂಭ: ಮುಂಡಾಜೆ ಗ್ರಾಮದ ನಿಡಿಗಲ್‌ನಿಂದ 3 ಕಿಮೀ ವ್ಯಾಪ್ತಿಯಲ್ಲಿ ರಸ್ತೆಯ ಒಂದು ಭಾಗಕ್ಕೆ ಮೇ ತಿಂಗಳಲ್ಲಿ ಡಾಂಬರೀಕರಣ ನಡೆಸಿ ಉಳಿದ ಇನ್ನೊಂದು ಭಾಗವನ್ನು ಅಗೆದುಹಾಕಿ ಹಾಗೆ ಬಿಡಲಾಗಿತ್ತು. ಇದರಿಂದ ರಸ್ತೆ ವ್ಯಾಪ್ತಿ ಕಿರಿದಾಗಿ ಇಲ್ಲಿ ಹಲವು ಅಪಘಾತಗಳು ಸಂಭವಿಸಿ ಜೀವಹಾನಿಯು ಉಂಟಾಗಿತ್ತು. ಡಾಂಬರು ಹಾಕದ ರಸ್ತೆಯ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದು ರಸ್ತೆಯ ಚರಂಡಿಯಾಗಿತ್ತು. ಇದೀಗ ರಸ್ತೆಯ ಇನ್ನೊಂದು ಭಾಗಕ್ಕೆ ಡಾಂಬರೀಕರಣ ನಡೆಸಲು ಜಲ್ಲಿ, ಕಾಂಕ್ರೀಟ್ ಮಿಶ್ರಣವನ್ನು ಹಾಕುವ ಕೆಲಸ ಭರದಿಂದ ನಡೆಯುತ್ತಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಜೀವ ಸಿಕ್ಕಿದೆ. ಪ್ರದೇಶದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಡಾಮರೀಕರಣ ಹಾಗೂ ಉಳಿದ ಕೆಲಸಗಳು ತ್ವರಿತವಾಗಿ ಸಾಗುವ ಭರವಸೆ ವಾಹನ ಸವಾರರಲ್ಲಿ ಮೂಡಿದೆ............

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಮತ್ತೆ ಪ್ರಾರಂಭವಾಗಿದೆ. ತ್ವರಿತವಾಗಿ ಅಗತ್ಯ ಸ್ಥಳಗಳಲ್ಲಿ ಕಾಮಗಾರಿ ನಡೆಸಿ ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ

- ಶಿವಪ್ರಸಾದ್ ಅಜಿಲ, ಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ