ಹರಾಜಾಗಿರುವ ನಿವೇಶನಗಳಿಗೆ ಕ್ರಯ, ಖಾತಾಪತ್ರಕ್ಕೆ ಕ್ರಮ

KannadaprabhaNewsNetwork |  
Published : Jun 20, 2024, 01:00 AM IST
19ಕೆಆರ್ ಎಂಎನ್ 1.ಜೆಪಿಜಿರಾಮನಗರದ  ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ  ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು. | Kannada Prabha

ಸಾರಾಂಶ

ರಾಮನಗರ: ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಚಿಸಿರುವ ಮೂರು ವಸತಿ ಬಡಾವಣೆಗಳಲ್ಲಿ ಹರಾಜು ಮಾಡಿರುವ ನಿವೇಶನಗಳಿಗೆ ಕ್ರಯ ಮತ್ತು ಖಾತಾಪತ್ರ ನೀಡುವುದು ಸೇರಿದಂತೆ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಮನಗರ: ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಚಿಸಿರುವ ಮೂರು ವಸತಿ ಬಡಾವಣೆಗಳಲ್ಲಿ ಹರಾಜು ಮಾಡಿರುವ ನಿವೇಶನಗಳಿಗೆ ಕ್ರಯ ಮತ್ತು ಖಾತಾಪತ್ರ ನೀಡುವುದು ಸೇರಿದಂತೆ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ಈ ಹಿಂದೆ ರಾಮನಗರ ಪ್ರಾಧಿಕಾರದ ವತಿಯಿಂದ ರಚಿಸಿರುವ ಜಿಗೇನಹಳ್ಳಿ/ಅರ್ಕಾವತಿ ವಸತಿ ಬಡಾವಣೆ, ಅರ್ಚಕರಹಳ್ಳಿ /ಹೆಲ್ತ್‌ಸಿಟಿ, ಸುಣ್ಣಘಟ್ಟ/ಕಣ್ವ ವಸತಿ ಬಡಾವಣೆಗಳಲ್ಲಿ ಹಂಚಿಕೆಯಾಗಿರುವ ನಿವೇಶನದಾರರಿಗೆ ಇದುವರೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕ್ರಯಪತ್ರ, ಖಾತಾ ನೋಂದಣಿ ಮತ್ತು ಪ್ರಸ್ತಾವಿತ ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸಲು ಮತ್ತು ಕಟ್ಟಡ ಪರವಾನಗಿ ನೀಡಲು ಸಾಧ್ಯವಾಗಿರಲಿಲ್ಲ. ಈ ವಿಷಯವಾಗಿ ಸರ್ಕಾರದ ಅನುಮತಿ ಕೋರಿ ಪ್ರಾಧಿಕಾರದ ವತಿಯಿಂದ 2024ರ ಜನವರಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಅಂಶಗಳ ಹಿನ್ನಲೆಯಲ್ಲಿ 2024ರ ಮಾರ್ಚ್‌ನಲ್ಲಿ ಕೆಲ ಅಂಶಗಳಿಗೆ ಸರ್ಕಾರದ ವತಿಯಿಂದ ಅನುಮೋದನೆ ಸಿಕ್ಕಿದೆ. ಇದಕ್ಕೆ ಕಾರಣರಾದ ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಮೂರು ವಸತಿ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದ ನೆರವು ಲಭ್ಯವಿಲ್ಲದ ಕಾರಣ ನಿವೇಶನದಾರರ ಸಭೆ ಕರೆದು ಅವರ ಸಲಹೆ ಸೂಚನೆ ಸಹಕಾರ ಪಡೆಯಲಾಗುವುದು. ಬಡಾವಣೆಗಳಲ್ಲಿ ಸ್ವಚ್ಚಚ್ಛತೆ, ಮೂಲ ಸೌಕರ್ಯ ಕಲ್ಪಿಸುವುದು ಮತ್ತು ರಸ್ತೆ ಬದಿ ಗಿಡ ನೆಡುವುದು, ಪಾರ್ಕ್ ಅಭಿವೃದ್ಧಿ ಕೆಲಸಗಳಿಗೆ ನಿವೇಶನದಾರರಿಂದಲೇ ಇಂತಿಷ್ಟು ಹಣದ ನೆರವು ಪಡೆಯುವ ಬಗ್ಗೆ ಅಧಿಕಾರಿಗಳು ಮತ್ತು ನಿರ್ದೇಶಕರು ಚರ್ಚೆ ನಡೆಸಿ ನಿರ್ಧರಿಸಿದರು. ಈ ವಿಷಯವಾಗಿ ಶೀಘ್ರ ನಿವೇಶನದಾರರ ಸಭೆಗೆ ದಿನಾಂಕ ನಿಗಧಿಪಡಿಸಿ ಎಂದು ಎಲ್ಲರೂ ಸಭೆಯಲ್ಲಿ ಸಲಹೆ ನೀಡಿದರು.

ಸಭೆಯಲ್ಲಿ ಸರ್ಕಾರದ ಅನುಮೋದನೆಯಂತೆ ನಿವೇಶನದಾರರಿಂದ ಮೂಲ ದಾಖಲೆಗಳು, ನಿವೇಶನ ಮೌಲ್ಯವನ್ನು ಪೂರ್ಣ ಪಾವತಿಸಿರುವ ಬಗ್ಗೆ ದೃಢೀಕರಿಸಿರುವ ರಶೀದಿ, 10 ವರ್ಷ ಲೀಸ್ ಅವಧಿ ಮುಕ್ತಾಯವಾಗಿರುವ ನಿವೇಶನದಾರರಿಗೆ ಕ್ರಯಪತ್ರ, ಖಾತಾ ನೊಂದಣಿ ನೀಡಲು ಸಭೆ ಸಮ್ಮತಿಸಿತು. ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಸಭೆ ಸರ್ವಾನುಮತದಿಂದ ಸಮ್ಮತಿಸಿತು ಎಂದು ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ಪರ್ವಿಜ್‌ಪಾಷಾ, ಪ್ರವೀಣ್, ಶ್ರೀನಿವಾಸ್, ಶ್ರೀದೇವಿ, ನಾಮ ನಿರ್ದೇಶಿತ ನಿರ್ದೇಶಕ ಮುತ್ತುರಾಜು, ಆಯುಕ್ತರಾದ ಶಿವನಂಕರೀಗೌಡ, ಬೆಸ್ಕಾಂ ಇಇ ನಾಗರಾಜು, ಲೋಕೋಪಯೋಗಿ ಇಲಾಖೆಯ ಇಇ ಶ್ರೀನಿವಾಸ್, ನಗರ ನೀರು ಸರಬರಾಜು ಒಳ ಚರಂಡಿ ಮಂಡಳಿ ಎಇ ಅನಿಲ್‌ಕುಮಾರ್ ಸೇರಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.

ಕೋಟ್ .............

ಹಲವು ವರ್ಷಗಳಿಂದ ನಗರಾಭಿವೃದ್ದಿ ಪ್ರಾಧಿಕಾರದಿಂದ ಹಂಚಿಕೆಯಾಗಿದ್ದ ನಿವೇಶನಗಳಿಗೆ ಭೂ ಮಾಲೀಕರ ಹೆಸರಿನಲ್ಲಿ ದಾಖಲೆಗಳು ಬರುತ್ತಿದ್ದರಿಂದ ನಿವೇಶನದಾರರಿಗೆ ಕ್ರಯ ಪತ್ರ/ಖಾತಾ ಪತ್ರ ನೀಡಲು ಸಾಧ್ಯವಾಗಿರಲಿಲ್ಲ, ಈ ಹಿಂದೆ ಸಂಸದರಾಗಿದ್ದ ಡಿ.ಕೆ.ಸುರೇಶ್ ಮತ್ತು ಶಾಸಕರಾದ ಎಚ್.ಎ.ಇಕ್ಬಾಲ್‌ಹುಸೇನ್ ಅವರು ಸರ್ಕಾರದ ಮಟ್ಟದಲ್ಲಿ ಪ್ರಾಧಿಕಾರದ ಪ್ರಸ್ತಾವನೆಯ ಬಗ್ಗೆ ಗಮನ ಸೆಳೆದು ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದರಿಂದ ನಿವೇಶನದಾರರ ಹಲವು ದಿನಗಳ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.

-ಎ.ಬಿ.ಚೇತನ್‌ಕುಮಾರ್, ಅಧ್ಯಕ್ಷರು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ

19ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ