45 ದಿನಗಳ ಜತೆಗೆ ಮೂರು ತಿಂಗಳವರೆಗೆ ನೋಂದಣಿ ಪ್ರಕ್ರಿಯೆಗೆ ಅನುಮತಿ । ಖರೀದಿಗೆ ಎನ್‌ಐಸಿ ತಂತ್ರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಜ್ಯದಲ್ಲೇ ಅತೀ ಹೆಚ್ಚು ಕೊಬ್ಬರಿ ಅವಲಂಬಿತ ತಾಲೂಕಾಗಿರುವ ಚನ್ನರಾಯಪಟ್ಟಣದಲ್ಲಿ ರೈತರಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದು ಜ.೨೦ ರಿಂದ ನೋಂದಣಿ ಆರಂಭವಾಗಲಿದೆ.ತಿಪಟೂರು, ಅರಸೀಕೆರೆ ಮತ್ತು ಚನ್ನರಾಯಪಟ್ಟಣ ಅತೀ ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿದ್ದು, ರೈತರು ಶೇ. ೭೫ರಷ್ಟು ತೆಂಗಿನ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಈ ಬಾರಿ ನಾಫೆಡ್ ಕೇಂದ್ರದಕ್ಕೆ ಹೆಚ್ಚು ಕೊಬ್ಬರಿ ಬರುವ ನಿರೀಕ್ಷೆಗಳಿವೆ.
೨೦೨೪ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಸಲು ಅನುಮತಿ ನೀಡಿದೆ. ಪ್ರತಿ ಕ್ವಿಂಟಾಲ್‌ಗೆ ೧೨೦೦೦ ರು. ನಂತೆ ೬೨೫೦೦ ಮೆಟ್ರಿಕ್ ಟನ್ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಂದ ಖರೀದಿಗೆ ಒಪ್ಪಿಗೆ ನೀಡಲಾಗಿದೆ.
೧ ಎಕರೆಗೆ ಆರು ಕ್ವಿಂಟಲ್ ಕೊಬ್ಬರಿ ಮಾರಾಟ ಮಾಡಲು ಅವಕಾಶವಿದ್ದು, ಗರಿಷ್ಠ ೨೦ ಕ್ವಿಂಟಲ್ ಮಾರಾಟ ಮಾಡಬಹುದು. ಖರೀದಿ ಕೇಂದ್ರಗಳ ಸಂಖ್ಯೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್ ಪೋರ್ಸ್ ನಿರ್ಧರಿಸಲಿದೆ. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಆಗಲಿದೆ. ವರ್ತಕರಿಂದ ಖರೀದಿಸದಂತೆ ಸೂಚನೆ ನೀಡಲಾಗಿದೆಯಾದರೂ ರಾಗಿ ಮಾರಾಟದಂತೆ ಕೊಬ್ಬರಿಯಲ್ಲಿಯೂ ಮಧ್ಯವರ್ತಿಗಳು ನುಸುಳುವ ಅಪಾಯ ಇದ್ದೇ ಇದೆ.
ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಜ.೧೯ರಿಂದ ಅರ್ಜಿ ಸ್ವೀಕರಿಸಲು ಪ್ರಾರಂಭಿಸಲಾಗುವುದು ರೈತರು ಎಫ್‌ಐಡಿ ಮತ್ತು ಆಧಾರ್ ಕಾರ್ಡ್ ತಂದು ನೋಂದಣಿ ಮಾಡಿಸಿಕೊಂಡು ಕೊಬ್ಬರಿಯನ್ನು ಬಿಡಬಹುದಾಗಿದ್ದು ರೈತ ಸಮಸ್ಯೆಗಳಿಗೆ ಹಾಗೂ ಮಾಹಿತಿ ಪಡೆಯಲು ನಾಫೆಡ್ ಅಧಿಕಾರಿ ಚೇತನ್ ಅವರ ದೂರವಾಣಿ ಸಂಖ್ಯೆ ೦೮೧೭೬-೪೫೪೨೪೫ ಸಂಪರ್ಕಿಸಬಹುದಾಗಿದೆ.
ವರ್ಷಪೂರ್ತಿ ಕೊಬ್ಬರಿ ಖರೀದಿಗೆ ಅವಕಾಶ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸಿಲ್ಲ. ಜ.೨೦ರಂದು ರೈತರ ನೋಂದಣಿ ಆರಂಭವಾಗಲಿದ್ದು ೪೫ ದಿನಗಳ ಕಾಲ ನೋಂದಣಿ ಜತೆಗೆ ಮುಂದಿನ ಮೂರು ತಿಂಗಳು ಖರೀದಿಗೆ ಅವಕಾಶ ಮಿತಿಗೊಳಿಸಲಾಗಿದೆ. ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಪೂರ್ಣವಾಗಲಿದ್ದು ನಂತರದಲ್ಲಿ ಖರೀದಿ ಕೇಂದ್ರ ಇರುವ ಬಗ್ಗೆ ತೆಂಗು ಬೆಳೆಗಾರರಿಗೆ ಅನುಮಾನಗಳಿವೆ.
ಚಂದ್ರಕಲಾ ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯರು, ಪಡುವನಹಳ್ಳಿ.
ಪ್ರೇಮಮ್ಮ, ರೈತ ಸಂಘದ ಮಹಿಳಾ ರಾಜ್ಯ ಉಪಾಧ್ಯಕ್ಷರು.