ಪ್ರವಾಸಿ ತಾಣಗಳ ಕುರಿತ ನಕಾರಾತ್ಮಕ ಮಾಹಿತಿಗೆ ಬೀಳಲಿ ಬ್ರೇಕ್

KannadaprabhaNewsNetwork |  
Published : Nov 10, 2026, 01:15 AM IST
ಎಚ್07.11.ಡಿಎನ್‌ಡಿ2: ಮೊಸಳೆ | Kannada Prabha

ಸಾರಾಂಶ

ಕೇವಲ ಮೊಸಳೆಗಳ ವಿಡಿಯೊಗಳಷ್ಟೇ ಅಲ್ಲದೆ, ಕಾಡಿನಲ್ಲಿ ಕಾಣಸಿಗುವ ಕಾಡುಪ್ರಾಣಿಗಳನ್ನು ಚಿತ್ರೀಕರಿಸುವ ನೆಪದಲ್ಲಿ ಅವುಗಳ ಹತ್ತಿರ ತೆರಳಿ ತೊಂದರೆ ನೀಡುವಂತಹ ಘಟನೆಗಳೂ ನಡೆಯುತ್ತಿವೆ ಎಂಬ ಆರೋಪಗಳಿವೆ.

ಗುರುಶಾಂತ ಜಡೆಹಿರೇಮಠ

ದಾಂಡೇಲಿ: ಪ್ರತಿವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳು ದಾಂಡೇಲಿ- ಜೋಯಿಡಾ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವದ ತಿಂಗಳಾಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಮಾಹಿತಿಗಳನ್ನು ಹರಿಬಿಡುತ್ತಿದ್ದು, ಇದರಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತಿದೆ ಎಂಬ ಕೂಗು ಕೇಳಿಬಂದಿದೆ.

ಹೆಚ್ಚಿನ ವೀಕ್ಷಣೆ ಹಾಗೂ ಜನಪ್ರಿಯತೆ ಗಳಿಸುವ ಉದ್ದೇಶದಿಂದ ಕೆಲವರು ದಾಂಡೇಲಿಯ ಕಾಳಿ ನದಿ ಸೇತುವೆ ಮೇಲೆ ನಿಂತು ಮೊಸಳೆಗಳಿರುವ ದೃಶ್ಯಗಳನ್ನು ಚಿತ್ರೀಕರಿಸಿ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೇವಲ ಮೊಸಳೆಗಳ ವಿಡಿಯೊಗಳಷ್ಟೇ ಅಲ್ಲದೆ, ಕಾಡಿನಲ್ಲಿ ಕಾಣಸಿಗುವ ಕಾಡುಪ್ರಾಣಿಗಳನ್ನು ಚಿತ್ರೀಕರಿಸುವ ನೆಪದಲ್ಲಿ ಅವುಗಳ ಹತ್ತಿರ ತೆರಳಿ ತೊಂದರೆ ನೀಡುವಂತಹ ಘಟನೆಗಳೂ ನಡೆಯುತ್ತಿವೆ ಎಂಬ ಆರೋಪಗಳಿವೆ. ವನ್ಯಜೀವಿಗಳ ಸಹಜ ಬದುಕಿಗೆ ಅಡ್ಡಿಪಡಿಸುವ ರೀತಿಯಲ್ಲಿ ಚಿತ್ರೀಕರಣ ನಡೆಸಿ, ಅವುಗಳ ವಿಡಿಯೊಗಳನ್ನು ಆತಂಕಕಾರಿ ರೀತಿಯಲ್ಲಿ ಬಿಂಬಿಸಿ ಪ್ರಸಾರ ಮಾಡುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ಅನಗತ್ಯ ಭೀತಿ ಮೂಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅದಲ್ಲದೆ, ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಡ್ರೋನ್ ಹಾರಿಸುವುದು, ಮೊಸಳೆಗಳಿರುವ ಪ್ರದೇಶಗಳಿಗೆ ಅತಿ ಸಮೀಪ ತೆರಳಿ ಚಿತ್ರೀಕರಣ ಮಾಡುವುದು ವನ್ಯಜೀವಿಗಳ ಸುರಕ್ಷತೆಗೂ ಅಪಾಯಕಾರಿಯಾಗಬಹುದು. ಇಂತಹ ಚಟುವಟಿಕೆಗಳು ಮುಂದುವರಿದರೆ ದಾಂಡೇಲಿ- ಜೋಯಿಡಾ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಪ್ರವಾಸೋದ್ಯಮಿಗಳು ಆತಂಕ ವ್ಯಕ್ತಪಡಿಸುವುದ ಒಂದು ಬದಿಯಾದರೆ ಅರಣ್ಯ ಇಲಾಖೆಯ ನಿಯಮಗಳ ಉಲ್ಲಂಘನೆ ಆಗುತ್ತಿದೆ.

ಸ್ಥಳೀಯ ಶಾಸಕರ ಪ್ರಯತ್ನದಿಂದ ದಾಂಡೇಲಿ- ಜೋಯಿಡಾ ಪ್ರವಾಸೋದ್ಯಮ ದೇಶ ವಿದೇಶಗಳಲ್ಲಿ ತನ್ನ ಹೆಸರನ್ನು ಮಾಡಿದೆ. ದಾಂಡೇಲಿ ಕಾಳಿ ನದಿ, ದಟ್ಟ ಅರಣ್ಯ, ವನ್ಯಜೀವಿಗಳು, ಜಲಸಾಹಸ ಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಅಂಶಗಳಾಗಿವೆ. ಇಂತಹ ಪ್ರವಾಸೋದ್ಯಮವನ್ನು ಮತ್ತಷ್ಟು ಬೆಳೆಸಿ ಉಳಿಸಬೇಕು. ಆದರೆ ಸ್ವಾರ್ಥಕ್ಕಾಗಿ ಸಾಮಾಜಿಕ ಜಾಲತಾಣಗಳ ಹೆಸರಿನಲ್ಲಿ ಕೆಲವರು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಬೇಸರದ ಸಂಗತಿ.ಪ್ರವಾಸೋದ್ಯಮ ಬೆಳೆಸಲಿ: ಸಾಮಾಜಿಕ ಜಾಲತಾಣಗಳು ಈ ಭಾಗದ ನೈಸರ್ಗಿಕ ಸೌಂದರ್ಯ, ಪ್ರವಾಸಿ ತಾಣಗಳು, ಸಾಹಸ ಕ್ರೀಡೆಗಳು, ಜಲಸಾಹಸ ಕ್ರೀಡೆಗಳು, ಪ್ರವಾಸಿ ಸೌಲಭ್ಯಗಳನ್ನು ಪರಿಚಯಿಸುವ ವೇದಿಕೆಯಾಗಬೇಕು. ಆದರೆ ಪ್ರವಾಸಿಗರಲ್ಲಿ ಭೀತಿ ಮೂಡಿಸುವ, ವನ್ಯಜೀವಿಗಳಿಗೆ ತೊಂದರೆ ನೀಡುವಂತಹ ವಿಡಿಯೊಗಳ ಪ್ರಸಾರಕ್ಕೆ ವೇದಿಕೆಯಾಗಬಾರದು. ಪ್ರವಾಸೋದ್ಯಮಕ್ಕೆ ಪೂರಕವಾದ ಮಾಹಿತಿಯನ್ನು ಹಂಚಿಕೊಳ್ಳುವ ಜವಾಬ್ದಾರಿ ಬ್ಲಾಗರ್ಸ್ ಗಳ ಮೇಲೂ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.ಈ ಹಿಂದೆಯೂ ಕೆಲವೊಂದು ಬ್ಲಾಗರ್‌ಗಳನ್ನು ಕಚೇರಿಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ. ವನ್ಯಜೀವಿಗಳಿಗೆ ಹಾಗೂ ಜಲಚರ ಪ್ರಾಣಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ವಿಡಿಯೊ ಚಿತ್ರೀಕರಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದನ್ನು ಸಹಿಸುವುದಿಲ್ಲ. ಮುಂದೆಯೂ ಇಂತಹ ಕೃತ್ಯಗಳು ಮರುಕಳಿಸಿದಲ್ಲಿ ಸಂಬಂಧಪಟ್ಟ ಬ್ಲಾಗರ್‌ಗಳ ವಿರುದ್ಧ ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅನಗತ್ಯ ಆತಂಕ: ಈಗಾಗಲೇ ಪ್ರವಾಸಿಗರ ಕೊರತೆಯಿಂದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅನೇಕ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರವಾಸಿಗರಲ್ಲಿ ಅನಗತ್ಯ ಆತಂಕ ಮೂಡಿಸುವ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕು ಎಂದು ಪ್ರವಾಸೋದ್ಯಮಿ ಅನಿಲ ಪಾಟ್ನೇಕರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ