ಧರ್ಮಸ್ಥಳಕ್ಕೆ ಕಳಂಕ ತರುವವರ ಮಟ್ಟ ಹಾಕಿ

KannadaprabhaNewsNetwork |  
Published : Aug 14, 2025, 01:00 AM IST
13ಕೆಪಿಎಲ್22  ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಅವಹೇಳನ ಮಾಡುವವರ ವಿರುದ್ಧ  ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕೊಪ್ಪಳದ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವುದು.13ಕೆಪಿಎಲ್23 ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಅಪಮಾನ ಮಾಡುತ್ತಿರುವುದನ್ನು ವಿರೋಧಿಸಿ ಮುಸ್ಲಿಂರು ಸೇರಿದಂತೆ ಅನೇಕ ಭಕ್ತರು ಕಾವ್ಯಾನಂದ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಧರ್ಮಸ್ಥಳ ಮಂಜುನಾಥ ಸ್ವಾಮೀಗೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಅವಹೇಳನ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಮಟ್ಟ ಹಾಕಬೇಕೆಂದು ಭಕ್ತರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು.

ಕೊಪ್ಪಳ:

ಧರ್ಮಸ್ಥಳ ಮಂಜುನಾಥ ಸ್ವಾಮೀಗೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಅವಹೇಳನ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಮಟ್ಟ ಹಾಕಬೇಕೆಂದು ಭಕ್ತರು ಹಾಗೂ ಜೈನ್‌ ಸಮಾಜ ಜಂಟಿಯಾಗಿ ನಗರದ ಅಶೋಕ ವೃತ್ತ ಹಾಗೂ ಕಾವ್ಯಾನಂದ ಪಾರ್ಕ್ ಬಳಿ ಬುಧವಾರ ಪ್ರತಿಭಟನೆ ನಡೆಸಿತು.

ಅಶೋಕ ವೃತ್ತದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ ಭಕ್ತರು ಸತ್ಯವನ್ನು ಬಯಲಿಗೆ ಎಳೆಯಲಿ. ಆದರೆ, ವಿನಾಕಾರಣ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ದುಷ್ಟ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಕಾವ್ಯಾನಂದ ಪಾರ್ಕ್ ಬಳಿಯೂ ಕೆಲಕಾಲ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯ ಮುಸ್ಲಿಂರು ಸಹ ಭಾಗವಹಿಸಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜೈನ್‌ ಸಮಾಜದ ಜಿಲ್ಲಾಧ್ಯಕ್ಷ ಪದ್ಮಗೌಡ ಹಿರೇಗೌಡ್ರ, ಕಾರ್ಯದರ್ಶಿ ಅಭಿನಂದನ ತುಂಬಳ, ಜೈನ್ ಮಿಲನ್ ಅಧ್ಯಕ್ಷ ಪಾಯಸಾಗರ, ಜೆಡಿಎಸ್ ಕೋರ್ ಕಮಿಟಿ ರಾಜ್ಯ ಕಾರ್ಯದರ್ಶಿ ಸಿ.ವಿ. ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ರಾಜು ಬಾಕಳೆ, ದೇವೇಂದ್ರಪ್ಪ ಬಳೂಟಗಿ, ಅಪ್ಪಣ್ಣ ಪದಕಿ, ಶರಣಪ್ಪ ಸಜ್ಜನ, ಪದಂ ಮೇಹತಾ, ಸುನಿಲ ಹೆಸರೂರು ಹಾಗೂ ಎಂ.ಎ. ದೇಸಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ವರ್ಷ ಅಗೆದರೂ ಏನು ಸಿಗಲ್ಲ: ಅಕ್ಬರ್ ಪಾಷಾ

ಅನಾಮಿಕನ ದೂರಿನ ಮೇರೆಗೆ ಎಸ್‌ಐಟಿ ಈಗಾಗಲೇ ಅಗೆದಿರುವ ಸ್ಥಳದಲ್ಲಿ ಏನು ದೊರಕಿಲ್ಲ. ಹೀಗೆ ಇನ್ನೂ ಒಂದು ವರ್ಷ ಅಗೆದರು ನಿಮಗೇನು ಸಿಗುವುದಿಲ್ಲ ಎಂದು ಮುಸ್ಲಿಂ ಮುಖಂಡ ಹಾಗೂ ಕೊಪ್ಪಳ ನಗರಸಭೆ ಸದಸ್ಯ ಅಕ್ಬರ್ ಪಾಷಾ ಎಸ್‌ಐಟಿಗೆ ಸವಾಲು ಹಾಕಿದರು.

ಕೊಪ್ಪಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿನಾಕಾರಣ ಆರೋಪ ಮಾಡುವುದು ಅಲ್ಲದೆ ಅವಹೇಳನ ಮಾಡುವುದಕ್ಕೆ ತಕ್ಕ ಶಿಕ್ಷೆಯಾಗುತ್ತದೆ. ಗಣೇಶ (ಗಣೇಶ ಚತುರ್ಥಿ) ಬಂದು ಹೋಗುವುದರೊಳಗಾಗಿ ಅವರಿಗೆ ತಕ್ಕ ಶಾಸ್ತಿ ಆಗುತ್ತದೆ ಎಂದು ಭವಿಷ್ಯ ನುಡಿದರು.

ಅಲ್ಲಿ ಮಂಜುನಾಥ ಸ್ವಾಮೀಜಿ ಇದ್ದು ಈ ವರೆಗೂ ಅನಾಮಿಕನ ಆರೋಪದಂತೆ ಅಸ್ಥಿಪಂಜರ ಸಿಕ್ಕಿಲ್ಲ. ಇನ್ನು ಒಂದು ವರ್ಷ ಅಗೆದರೂ ಸಿಗುವುದಿಲ್ಲ. ಅಲ್ಲಿ ಯಾವುದೇ ರೀತಿಯ ಕುರುಹು ದೊರೆಕಿಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೂ ಕೆಲವರು ವಿನಾಕಾರಣ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ಕೃತ್ಯದಲ್ಲಿ ತೊಡಗಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ಅವರು, 12ನೇ ಶತಮಾನದಲ್ಲಿ ಕ್ರಾಂತಿಯಾದ ಬಳಿಕ ಧರ್ಮಸ್ಥಳದಲ್ಲಿ ಕ್ರಾಂತಿಯಾಗುತ್ತಿದೆ. ಬಡವರಿಗೆ ಅನ್ನ ಸಿಗುತ್ತಿದೆ. ಬಡವರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಧರ್ಮಸ್ಥಳ ಸ್ವ-ಸಹಾಯ ಸಂಘದಲ್ಲಿ ಜಾತಿ ನೋಡದೆ, ಯಾವುದೇ ಆಸ್ತಿ ದಾಖಲೆ ಕೇಳದೆ ಸಾಲ ನೀಡುತ್ತಾರೆ. ನಾನು ಸಹ ಮಣ್ಣಿನ ಮನೆಯಲ್ಲಿದ್ದವನು. ಅಲ್ಲಿ ಸಾಲ ಪಡೆದು ಉತ್ತಮ ಮನೆ ಕಟ್ಟಿಕೊಂಡಿದ್ದೇನೆ. ನನ್ನಂತೆ ಎಷ್ಟೋ ಜನರಿಗೆ ಸಹಾಯವಾಗಿದೆ ಎಂದರು.

ಇಂಥ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಏನಾಗಿ ಸಾಯುತ್ತಾರೋ ಎನ್ನುವುದನ್ನು ರಾಜ್ಯದ ಜನರು ನೋಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಅನೇಕರು ಮಾತನಾಡಿ ಧರ್ಮಸ್ಥಳ ಕ್ಷೇತ್ರವನ್ನು ಬೆಂಬಲಿಸಿದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!