ಕನ್ನಡಪ್ರಭ ವಾರ್ತೆ ಪುತ್ತೂರು
ಇತ್ತೀಚೆಗಷ್ಟೇ ಪುತ್ತೂರು ನಗರ ಯೋಜನಾ ಪ್ರಾಧಿಕಾರದ (ಪುಡಾ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ವಕೀಲ ಭಾಸ್ಕರ ಕೋಡಿಂಬಾಳ ಅವರು ಶನಿವಾರ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ. ಶಾಸಕರ ಒತ್ತಡಕ್ಕೆ ಅಸಮಾಧಾನಗೊಂಡು ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಭಾಸ್ಕರ ಕೋಡಿಂಬಾಳ ಅಧಿಕಾರ ಸ್ವೀಕರಿಸಿದ್ದರು. ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಅಶೋಕ್‌ಕುಮಾರ್ ರೈ ಅವರು ಜುಲೈ ೧೧ರಂದು ಬೆಂಗಳೂರಿನಿಂದ ಕರೆ ಮಾಡಿ, ಪೂಡಾ ಈಗ ನಿಷ್ಕ್ರಿಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕರಿಗೆ ಅಸಮಾಧಾನ ಇರುವುದರಿಂದ ಈ ಹುದ್ದೆಯಲ್ಲಿ ನಾನು ಮುಂದುವರಿಯಲು ಇಚ್ಛಿಸುವುದಿಲ್ಲ. ಸ್ವಯಂ ಆಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.ಕಡಬ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದ ನನಗೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗುವ ಅವಕಾಶ ಇತ್ತಾದರೂ ಅದನ್ನು ಬಿಟ್ಟುಕೊಟ್ಟಿದ್ದೆ. ಪುತ್ತೂರಿಗೆ ಬಂದ ಬಳಿಕ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಶಕುಂತಳಾ ಶೆಟ್ಟಿ ಅವರು ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ಹಾಗೂ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಶೋಕ್‌ಕುಮಾರ್ ರೈ ಅವರ ಚುನಾವಣಾ ಏಟೆಂಟ್ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾರ ಶಿಫಾರಸ್ಸು ಕೂಡ ಇಲ್ಲದೆ ಶಾಸಕರೇ ನನ್ನನ್ನು ಪೂಡಾದ ಅಧ್ಯಕ್ಷರಾಗಿ ಮಾಡಿದ್ದಾರೆ.
ಮಾ.೧೬ರಂದು ನಾನು ಪೂಡಾ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೆ. ಮರುದಿನವೇ ಜಾರಿಗೊಂಡಿದ್ದ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜೂನ್ ೬ರ ತನಕ ಇತ್ತು. ಜೂನ್ ೧೯ರಂದು ಪೂಡಾದಲ್ಲಿ ಪ್ರಥಮ ಸಭೆ ನಡೆಸಿ ಸಮಸ್ಯೆಗಳನ್ನು ಶಾಸಕರ ನೇತೃತ್ವದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೆವು. ಸಮಸ್ಯೆಗಳು ತುಂಬಾ ಇದೆ. ಕಟ್ ಕನ್ವರ್ಷಣ್ ವಿಚಾರದಲ್ಲಿ ಸಮಸ್ಯೆಯಿದ್ದು, ಇದಕ್ಕೆ ಸಂಬಂಧಿಸಿ ಮಂಗಳೂರು ಮತ್ತು ಉಡುಪಿಯಲ್ಲಿ ಸಣ್ಣ ವಿನಾಯಿತಿ ಇದೆ. ಪುತ್ತೂರಿಗೂ ಈ ತಿದ್ದುಪಡಿ ಮಾಡಬೇಕೆಂದು ಚರ್ಚಿಸಿದ್ದೆ. ಸಿಕ್ಕಿದ ಅತ್ಯಲ್ಪ ಅವಧಿಯಲ್ಲಿ ಪ್ರ‍್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ನಾನು ಪ್ರ‍್ರಾಮಾಣಿಕವಾಗಿ ಕೆಲಸ ಮಾಡಿದ್ದರೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಮನಸ್ಸಿಗೆ ನೋವಾಗಿದೆ. ಹಾಗಾಗಿ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದೇನೆ. ಮುಂದೆ ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ.ಬ್ಲಾಕ್ ಅಧ್ಯಕ್ಷರಿಂದಲೂ ರಾಜಿನಾಮೆ ಪ್ರಕಟ: ಪುತ್ತೂರು ಕಾಂಗ್ರೆಸ್‌ನಲ್ಲಿ ಯಾವುದೂ ಸರಿಯಾಗಿಲ್ಲ ಎಂಬುದು ಕಂಡು ಬರುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಅವರು ತಾವು ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದರು. ಶಾಸಕರ ಮತ್ತು ಪಕ್ಷದ ಮುಖಂಡರ ನಡುವೆ ಬಿನ್ನಾಭಿಪ್ರಾಯ ನಡೆಯುತ್ತಿದೆ. ಇದರ ಭಾಗವಾಗಿ ಮುಖಂಡರು ರಾಜಿನಾಮೆಯನ್ನು ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಪುಡಾ ಅಧ್ಯಕ್ಷರು ರಾಜಿನಾಮೆ ನೀಡುವ ಮೂಲಕ ಮೂವರು ರಾಜಿನಾಮೆ ನೀಡಿದಂತಾಗಿದೆ.