ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಹಾಗೂ ಸಮಾವೇಶ 14ರಂದು ಪುತ್ತೂರಿನ ಸುಭದ್ರಾ ಸಭಾಮಂದಿರದಲ್ಲಿ ಆಯೋಜಿಸಲಾಗಿದೆ.
ಪುತ್ತೂರು: ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಬೆಳೆಗಾರರ ಒಕ್ಕೂಟದಿಂದ ನೇತೃತ್ವದಲ್ಲಿ ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಹಾಗೂ ಸಮಾವೇಶ 14ರಂದು ಪುತ್ತೂರಿನ ಸುಭದ್ರಾ ಸಭಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಸಮಾವೇಶವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ. ವೇಣುಗೋಪಾಲ್ ಸಮಗ್ರ ಕಾಳುಮೆಣಸು ಕೊಯ್ಲು ಮಾಡುವ ವಿಧಾನ, ಸಂಸ್ಕರಣೆ, ಶೇಖರಣೆಗೊಳಿಸುವ ವಿಧಾನದ ಬಗೆಗೆ ವಿಷಯ ಮಂಡನೆ ನಡೆಸಿಕೊಡಲಿದ್ದಾರೆ ಎಂದರು.ಸೆವೆನ್ ಬೀನ್ ಟೀಮ್‌ನ ಮುಖ್ಯಸ್ಥ ಡಾ. ಎಚ್.ಎಸ್.ಧರ್ಮರಾಜ್ ಸಕಲೇಶಪುರ ಕಾಫಿ ಕೊಯ್ಲು ಮಾಡುವ ವಿಧಾನ, ಸಂಸ್ಕರಣೆ, ಶೇಖರಣೆಗೊಳಿಸುವ ವಿಧಾನದ ಬಗೆಗೆ ಸಮಗ್ರ ಮಾಹಿತಿ ನೀಡುವರು. ಧೂಪದ ಗಿಡಗಳಲ್ಲಿ ಕಾಳುಮೆಣಸು ಬೆಳೆಯುತ್ತಿರುವ ಯುವ ಕೃಷಿಕ ಅನಂತರಾಮಕೃಷ್ಣ ಭಟ್ ಪಳ್ಳತ್ತಡ್ಕ ಧೂಪದ ಗಿಡಗಳ ನಾಟಿ ಹಾಗೂ ಇದರಲ್ಲಿ ಕಾಳುಮೆಣಸು ಗಿಡಗಳನ್ನು ಬೆಳೆಸುವುದು ಹಾಗೂ ನಿರ್ವಹಣೆ ಬಗೆಗೆ ಸಮಗ್ರ ಮಾಹಿತಿ ಒದಗಿಸಿಕೊಡಲಿದ್ದಾರೆ. ಇಂದೋರ್‌ನ ಶ್ರೀ ಸಿದ್ಧಿ ಅಗ್ರಿ ಕಂಪೆನಿ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥ ಪೆರುವೊಡಿ ನಾರಾಯಣ ಭಟ್ ಅವರು ಅಡಿಕೆ ಎಲೆಚುಕ್ಕಿ ರೋಗ ಹತೋಟಿ ಮತ್ತು ನಿರ್ಮೂಲನೆ ಬಗೆಗೆ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದರು.
ಕಾಸರಗೋಡಿನ ಸಿಪಿಸಿಆರ್‌ಐ ವಿಜ್ಞಾನಿ ಡಾ. ರವಿ ಭಟ್, ಕ್ಯಾಂಪ್ಕೋ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಹಿರಿಯ ಪ್ರಗತಿಪರ ಕೃಷಿಕ ಪಡಾರು ತಿರುಮಲೇಶ್ವರ ಭಟ್ ದೇಲಂಪಾಡಿ, ಕಾಳುಮೆಣಸು ಕಸಿಕಟ್ಟಿ ಬೆಳೆಸಿದ ಅನುಭವಿ ಕೃಷಿಕೆ ಸುಜಾತಾ ರಮೇಶ್ ಅತಿಥಿಗಳಾಗಿ ಭಾಗವಹಿಸುವರು.ಕಾಫಿ ಹಾಗೂ ಕಾಳುಮೆಣಸು ಕೃಷಿಯಲ್ಲಿ ಅಪಾರ ಸಾಧನೆ ಮಾಡಿರುವ ವೈ.ಎನ್.ಕೃಷ್ಣೇಗೌಡ, ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ.ವೇಣುಗೋಪಾಲ್ ಹಾಗೂ ಧೂಪದ ಗಿಡಗಳಲ್ಲಿ ಕಾಳುಮೆಣಸು ಬೆಳೆಯುತ್ತಿರುವ ಯುವ ಕೃಷಿಕ ಅನಂತರಾಮಕೃಷ್ಣ ಭಟ್ ದಂಪತಿಯನ್ನು ಸನ್ಮಾನಿಸಲಾಗುತ್ತದೆ.ವೈವಿಧ್ಯಮಯ ಮಾವಿನ ಗಿಡಗಳು, ಹಲಸಿನ ಗಿಡಗಳು, ರಾಮ ಫಲ, ಸೀತಾಫಲ, ಚಿಕ್ಕು, ದಾಳಿಂಬೆ, ಜಾಯಿಕಾಯಿ, ಮ್ಯಾಂಗೋಸ್ಟಿನ್, ಕಿತ್ತಳೆ, ಲಿಂಬೆ, ನೇರಳೆ, ಮೂಸುಂಬಿಯೇ ಮೊದಲಾದ ಹತ್ತು ಹಲವು ಬಗೆಯ ಗಿಡಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಜತೆಗೆ ಹಲವು ಬಗೆಯ ಗೊಬ್ಬರ ತಯಾರಿಕಾ ಸಂಸ್ಥೆಗಳ ಮಳಿಗೆ, ಕಾಳುಮೆಣಸು ಕೊಯ್ಯುವುದಕ್ಕೆ ಏರುವ ಏಣಿ, ಕಾಳುಮೆಣಸು ಬಿಡಿಸುವ ಯಂತ್ರ, ಶುದ್ಧೀಕರಿಸುವ ಯಂತ್ರಗಳ ಮಳಿಗೆ, ಅಡಿಕೆ ಕೊಯ್ಲು ಹಾಗೂ ಔಷಧ ಸಿಂಪಡಣೆಗಾಗಿ ರೂಪಿಸಲಾಗಿರುವ ಹೈಟೆಕ್ ದೋಟಿ ಹಾಗೂ ಎಲೆಚುಕ್ಕಿ ರೋಗಕ್ಕೆ ಕಂಡುಹಿಡಿಯಲಾದ ಔಷಧದ ಮಳಿಗೆ, ಆಯುರ್ವೇದ ಮಳಿಗೆ, ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆ, ಮಂಗಗಳ ಹಾವಳಿ ತಡೆಗಟ್ಟುವ ಸಲಕರಣೆಯ ಮಳಿಗೆ, ಹನಿನೀರಾವರಿ ವ್ಯವಸ್ಥೆಯ ಮಳಿಗೆ, ಬ್ಯಾಂಕ್‌ಗಳ ಮಳಿಗೆ, ಸಾವಯವ ಐಸ್‌ಕ್ರೀಂ ಮಳಿಗೆ ಮೊದಲಾದ ಆಹಾರ ಮಳಿಗೆಗಳೂ ಇರಲಿವೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಿದರು. ಒಕ್ಕೂಟದ ಪ್ರಮುಖರಾದ ಜಿ.ಕೆ. ಪ್ರಸನ್ನ, ಅಜಿತ್ ಪ್ರಸಾದ್ ರೈ, ಗೋಪಾಲಕೃಷ್ಣ ಭಟ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.