ಕನ್ನಡಪ್ರಭವಾರ್ತೆ ಪುತ್ತೂರುಪುತ್ತೂರು ನಗರ ಸಭೆಯಲ್ಲಿ ಸದಸ್ಯರಿಬ್ಬರ ನಿಧನದಿಂದಾಗಿ ತೆರವಾಗಿದ್ದ ವಾರ್ಡ್ ೧ ಮತ್ತು ವಾರ್ಡ್ ೧೧ ಕ್ಷೇತ್ರಕ್ಕೆ ಡಿ.೨೭ರಂದು ನಡೆದ ಉಪಚುನಾವಣೆಯಲ್ಲಿ ವಾರ್ಡ್ ೧ರಲ್ಲಿ ಕಾಂಗ್ರೆಸ್ ಹಾಗೂ ವಾರ್ಡ್ ೧೧ರಲ್ಲಿ ಬಿಜೆಪಿ ಜಯಗಳಿಸಿದೆ. ಬಹಳ ನಿರೀಕ್ಷೆಯನ್ನು ಇಟ್ಟುಕೊಂಡು ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಪುತ್ತಿಲ ಪರಿವಾರದ ನಿರೀಕ್ಷೆಯು ಹುಸಿಯಾಗಿದೆ.
ವಾರ್ಡ್ ೧ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಸೇವಿರೆ ಅವರು ಜಯಗಳಿಸಿದ್ದು, ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಪುತ್ತಿಲ ಪರಿವಾರದ ಪಕ್ಷೇತರ ಅಭ್ಯರ್ಥಿ ಅನ್ನಪೂರ್ಣ ಅವರನ್ನು ೧೧೯ ಮತಗಳ ಅಂತರದಿಂದ ಸೋಲಿಸಿ ಗೆಲುವು ಪಡೆದುಕೊಂಡಿದ್ದಾರೆ. ದಿನೇಶ್ ಸೇವಿರೆ ಅವರಿಗೆ ೪೨೭ ಮತಗಳು, ಅನ್ನಪೂರ್ಣ ಅವರಿಗೆ ೩೦೮ ಮತಗಳು ಲಭಿಸಿದೆ. ಬಿಜೆಪಿಯ ಸುನೀತಾ ಅವರು ೧೧೯ ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ೪ ಮತಗಳು ನೋಟಾಕ್ಕೆ ಬಿದ್ದಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಯು ಗೆಲುವು ಪಡೆದಿತ್ತು.ವಾರ್ಡ್ ೧೧ರಲ್ಲಿ ಬಿಜೆಪಿ ರಮೇಶ್ ರೈ ಅವರು ಗೆಲುವು ಪಡೆದುಕೊಂಡಿದ್ದಾರೆ. ಅವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಾಮೋದರ್ ಭಂಡಾರ್ಕರ್ ಅವರನ್ನು ೩೧ ಮತಗಳ ಅಂತರದಿಂದ ಸೋಲಿಸಿ ಗೆಲುವು ಪಡೆದುಕೊಂಡಿದ್ದಾರೆ. ರಮೇಶ್ ರೈ ಅವರಿಗೆ ೪೩೧ ಮತಗಳು, ದಾಮೋದರ್ ಭಂಡಾರ್ಕರ್ ಅವರಿಗೆ ೪೦೦ ಮತಗಳು ಹಾಗೂ ಪುತ್ತಿಲ ಪರಿವಾರದ ಪಕ್ಷೇತರ ಅಭ್ಯರ್ಥಿ ಚಿಂತನ್ ಅವರಿಗೆ ೨೧೬ ಮತಗಳು ಲಭಿಸಿದೆ. ೬ ಮತಗಳು ನೋಟಾ ಪಾಲಾಗಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆದಿತ್ತು.
ಪುತ್ತಿಲ ಪರಿವಾರದ ತಪ್ಪಿದ ಲೆಕ್ಕಾಚಾರ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಯ ಆಯ್ಕೆಯನ್ನು ವಿರೋಧಿಸಿ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿಗೆ ಸಡ್ಡು ಹೊಡೆದು ೨ನೇ ಸ್ಥಾನವನ್ನು ಪಡೆಯುವ ಜೊತೆಗೆ ಬಿಜೆಪಿಯನ್ನು ೩ನೇ ಸ್ಥಾನಕ್ಕೆ ತಳ್ಳಿದ್ದ ಅರುಣ್‌ಕುಮಾರ್ ಪುತ್ತಿಲ ಅವರು ಬಾರೀ ಪ್ರಚಾರ ಪಡೆದುಕೊಂಡಿದ್ದರು. ಪುತ್ತಿಲ ಪರಿವಾರದ ಪಕ್ಷೇತರ ಅಭ್ಯರ್ಥಿ ಅರುಣ್‌ಕುಮಾರ್ ಪುತ್ತಿಲ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಾಗೂ ಗೆಲುವು ಸಾಧಿಸಿದ್ದ ಅಶೋಕ್‌ಕುಮಾರ್ ರೈ ಅವರಿಗೆ ನಿಕಟ ಸ್ಪರ್ಧೆ ನೀಡಿದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಆ ಬಳಿಕ ಪುತ್ತಿಲ ಪರಿವಾರವನ್ನು ಸ್ಥಾಪಿಸಿಕೊಂಡು ಪುತ್ತೂರು ತಾಲೂಕಿನ ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯಿತಿಯ ತೆರವಾಗಿದ್ದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ ಆರ್ಯಾಪು ಗ್ರಾಮ ಪಂಚಾಯಿತಿಯಲ್ಲಿ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದರು. ಈ ಮಧ್ಯೆ ಬಿಜೆಪಿ ಹಾಗೂ ಪುತ್ತಿಲ ಪರಿವಾರ ನಾಯಕರ ನಡುವೆ ಸಂಧಾನ ಪ್ರಯತ್ನಗಳು ನಡೆದಿದ್ದರೂ ಫಲಕಾರಿಯಾಗಿರಲಿಲ್ಲ. ಇದರ ಬದಲಾಗಿ ಪುತ್ತಿಲ ಪರಿವಾರದವರು ಸಂಘಟನೆಯನ್ನು ರಾಜಕೀಯವಾಗಿ ಬಲಪಡಿಸುವ ಉದ್ದೇಶವನ್ನಿಟ್ಟುಕೊಂಡು ಕ್ಷೇತ್ರದ ವಿವಿಧ ಕಡೆಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎನ್ನಲಾಗುತ್ತಿದೆ. ನಗರಸಭೆಯ ಉಪಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ-ಪುತ್ತಿಲ ಪರಿವಾರವನ್ನು ಒಂದುಗೂಡಿಸುವ ಪ್ರಯತ್ನ ನಡೆಯಿತಾದರೂ ಪುತ್ತಿಲ ಪರಿವಾರದ ನಾಯಕರು ಅದಕ್ಕೆ ಸೊಪ್ಪು ಹಾಕದೆ ಸಂಘಟನೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.ಪುತ್ತಿಲ ಪರಿವಾರದಿಂದ ನಗರಸಭೆಯ ಎರಡೂ ವಾರ್ಡುಗಳಲ್ಲಿಯೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡು ಪ್ರಚಾರ ಕಾರ್ಯ ಮಾಡಿದ್ದರು. ಆದರೆ ನೆಲ್ಲಿಕಟ್ಟೆ ೧೧ನೇ ವಾರ್ಡಿನಲ್ಲಿ ಪುತ್ತಿಲ ಪರಿವಾರದ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದ್ದು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ನಗರಸಭೆಯ ೧೧ನೇ ವಾರ್ಡಿನಲ್ಲಿ ಪುತ್ತಿಲ ಪರಿವಾರ ಎರಡನೇ ಸ್ಥಾನ ಪಡೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಯ ಎದುರು ಸೋಲೊಪ್ಪಿಕೊಂಡಿದೆ.