ಪುತ್ತೂರು ನೆಹರೂನಗರ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : May 03, 2024, 01:07 AM IST
ಫೋಟೋ: ೧ಪಿಟಿಆರ್-ಸೇತುವೆಸಂಸದ ನಳಿನ್ ಕುಮಾರ್ ಕಟೀಲ್ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಬುಧವಾರ ಸಂಜೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕೃತವಾಗಿ ರಸ್ತೆ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭವಾರ್ತೆ ಪುತ್ತೂರು

ಕೇಂದ್ರ ಸರ್ಕಾರದಿಂದ 535 ಕೋಟಿ ರು. ವೆಚ್ಚದಲ್ಲಿ ರೈಲ್ವೇ ಇಲಾಖೆಯ ವತಿಯಿಂದ ಏಕಪಥದಿಂದ ದ್ವಿಪಥ ರಸ್ತೆಗೆ ವಿಸ್ತರಣೆಗೊಂಡು ನಿರ್ಮಾಣಗೊ೦ಡಿರುವ ನೆಹರೂನಗರ ರೈಲ್ವೇ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿದೆ.

ಬುಧವಾರ ಸಂಜೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕೃತವಾಗಿ ರಸ್ತೆ ಸಂಚಾರಕ್ಕೆ ಚಾಲನೆ ನೀಡಲಾಯಿತು. ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲದೆ ಸೇತುವೆಯನ್ನು ಸಂಚಾರ ಮುಕ್ತಗೊಳಿಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ ಸಂಸದರು ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಮೇಲ್ಸೇತುವೆ ಅಗಲಗೊಳಿಸಬೇಕೆಂಬುದು ಬಹು ಸಮಯಗಳ ಬೇಡಿಕೆಯಾಗಿತ್ತು. ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುವ ಸೇತುವೆಯನ್ನು ಅಭಿವೃದ್ಧಿಪಡಿಸಬೇಕು ಎಂದು ವಿವೇಕಾನಂದ ವಿದ್ಯಾಸಂಸ್ಥೆಯಿಂದಲೂ ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಪೂರ್ಣ ಪ್ರಮಾಣದಲ್ಲಿ ಅನುದಾನವನ್ನು ನೀಡಿದ್ದರು. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪುತ್ತೂರು, ಉಪ್ಪಿನಂಗಡಿಗೆ ಬೈಪಾಸ್, ವರ್ತುಲ ರಸ್ತೆಯಾಗಿಯೂ ಬಳಕೆಯಾಗುವ ಉದ್ದೇಶದಿಂದ ಇದು ಆದ್ಯತೆ ಅಭಿವೃದ್ಧಿ ವಿಚಾರವಾಗಿತ್ತು. ಬಳಿಕದಲ್ಲಿ ರೈಲ್ವೇ ನಿಯಮಾವಳಿ 50.50 ರ ಅನುಪಾತದ ಅನುದಾನ ನೀಡುವ ಕುರಿತ ಚರ್ಚೆಯೂ ಆಗಿತ್ತು. ಆದರೆ ಕೊನೆಗೆ ಸಂಪೂರ್ಣ ಅನುದಾನವನ್ನೂ ಕೇಂದ್ರ ರೈಲ್ವೇ ಇಲಾಖೆಯೇ ನೀಡಿದೆ. ಸ್ಥಳೀಯಾಡಳಿತದ ವ್ಯಾಪ್ತಿಯಲ್ಲಿದ್ದರೂ ಸಂಪೂರ್ಣ ಅನುದಾನವನ್ನು ರೈಲ್ವೇ ಇಲಾಖೆಯೇ ನೀಡುವುದು ದೇಶದಲ್ಲೇ ಪ್ರಥಮವಾಗಿದೆ. ಹಲವು ರೀತಿಯ ಅಡೆತಡೆಗಳಿದ್ದರೂ ಸೀಮಿತ 5 ತಿಂಗಳ ಅವಧಿಯಲ್ಲಿ ಮೇಲ್ಸೇತುವೆ ನಿರ್ಮಾಣದ ಜೊತೆಗೆ ರಸ್ತೆಯೂ ಸಂಪೂರ್ಣ ಅಭಿವೃದ್ಧಿಗೊಂಡು ಸಂಚಾರಕ್ಕೆ ಮುಕ್ತಗೊಂಡಿದೆ. ಸೀಮಿತ ಅವಧಿಯಲ್ಲಿ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು ರೈಲ್ವೇಗೆ ಸಂಬಂಧಿಸಿದ ಪುತ್ತೂರಿನ ಎಲ್ಲ ಬೇಡಿಕೆಗಳು ಈಡೇರಿವೆ. ಎಪಿಎಂಸಿ ರೈಲ್ವೇ ಅಂಡರ್ ಪಾಸ್, ಹಾರಾಡಿ ರೈಲ್ವೇ ಸಂಪರ್ಕ ರಸ್ತೆ, ವಿವೇಕಾನಂದ ಮೇಲ್ಸೇತುವೆಯ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ. ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿ ಪ್ರಮುಖರಾದ ಅಚ್ಯುತ್ ನಾಯಕ್, ಇ. ಶಿವಪ್ರಸಾದ್, ಸಂತೋಷ್ ಬೊನಂತಾಯ, ರವಿ ನಾರಾಯಣ, ಶ್ರೀಪತಿ ಕಲ್ಲುರಾಯ, ರೂಪಲೇಖಾ, ವಿಷ್ಣು ಗಣಪತಿ ಭಟ್, ಮುರಳಿಕೃಷ್ಣ ಚಳ್ಳಂಗಾರು, ಡಾ. ಸುಧಾ ರಾವ್, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ವಿಶ್ವನಾಥ ಗೌಡ, ಶಿವಕುಮಾರ್, ವಿನಯ ಕುಮಾರ್ ಕಲ್ಲೇಗ, ದಿನೇಶ್ ಜೈನ್, ಮುರಳಿಕೃಷ್ಣ ಹಸಂತಡ್ಕ, ಶ್ರೀಧರ್ ತೆಂಕಿಲ, ಸೀತಾರಾಮ ರೈ ಕೆದಂಬಾಡಿಗುತ್ತು, ರಾಜೇಶ್ ಬನ್ನೂರು ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ