ಪುತ್ತೂರು ; ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬುಧವಾರ ಸಂಜೆ ಸುಮಾರು ಒಂದೂವರೆ ತಾಸು ಗುಡುಗು, ಗಾಳಿ ಸಹಿತ ಬಿರುಸಿನ ಮಳೆಯಾಗಿದೆ. ನಗರದ ಹಲವು ಕಡೆಗಳಲ್ಲಿ ಗಾಳಿಯಿಂದಾಗಿ ಹಾನಿ ಸಂಭವಿಸಿದೆ. ಪುತ್ತೂರು ತಾಲೂಕಿನಾದ್ಯಂತ ಸಂಜೆಯಿಂದ ರಾತ್ರಿಯ ತನಕ ವಿದ್ಯುತ್ ಸ್ಥಗಿತಗೊಂಡಿತ್ತು. ನಗರದ ಆನೆಮಜಲು ಬಳಿಯಲ್ಲಿರುವ ನೂತನ ಕೋರ್ಟು ಆವರಣದ ಗೋಡೆಯು ಕುಸಿದು ರಸ್ತೆಗೆ ಬಿದ್ದು ಆನೆಮಜಲು ದೈಯ್ಯರಮಾಡ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿದೆ. ಕೋರ್ಟ್‌ನ ಇನ್ನೊಂದು ಬದಿಯ ಆವರಣ ಗೋಡೆಯೂ ಕುಸಿಯುವ ಹಂತದಲ್ಲಿದೆ.
ನಗರದ ಬನ್ನೂರು ಜೈನರಗುರಿ ಎಂಬಲ್ಲಿ ಮರದ ಕೊಂಬೆಯೊಂದು ವಿದ್ಯುತ್ ಕಂಬದ ಮೇಲೆ ತುಂಡಾಗಿ ಬಿದ್ದ ಪರಿಣಾಮದಿಂದ ವಿದ್ಯುತ್ ಕಂಬ ಹಾಗೂ ತಂತಿಗೆ ಹಾನಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು.