ಪುತ್ತೂರು: ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಾಶಿವ ಭಟ್ಟ ಪಳ್ಳು ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾ ತಮ್ಮ ಸುಧೀರ್ಘ ಬದುಕಿನಲ್ಲಿ ಯಕ್ಷಗಾನ ಪ್ರಸಂಗವನ್ನು ಹನ್ನೆರಡು ಭಾಷೆಗಳಲ್ಲಿ ರಚಿಸಿರುವುದು ನಿಜಕ್ಕೂ ಶ್ಲಾಘನೀಯ. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಕೃತಿಗಳು ಎಂದೆಂದಿಗೂ ಜನಪ್ರಿಯವಾಗಿರುತ್ತವೆ. ಭಗೀರಥನ ಕಥೆ ಮತ್ತು ಸತ್ಯವತಿ ಸಾವಿತ್ರಿಯ ಕಥೆಯನ್ನು ನೆನಪು ಮಾಡಿಕೊಂಡಾಗ ‘ಋಣಮುಕ್ತಿ-ಅಮೃತತ್ವದೆಡೆಗೆ ಗೀತ ರೂಪಕಗಳು’ ಎಂಬ ಕೃತಿಗೆ ಹೆಸರು ಬರಲು ಕಾರಣವಾಯಿತು ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ವರದರಾಜ್ ಚಂದ್ರಗಿರಿ ಹೇಳಿದರು.ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವ ಶ್ರೀ ಸಭಾಂಗಣದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ, ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಸೌರಭ ಪ್ರಸಾರಾಂಗ ಮತ್ತು ಐಕ್ಯೂಎಸಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಾಲಯ ಬೆಟ್ಟಂಪಾಡಿ ಆಯೋಜಿಸಿದ ಡಾ. ಡಿ. ಸದಾಶಿವ ಭಟ್ಟ ಪಳ್ಳುಮನೆ ಅವರ ‘ಋಣಮುಕ್ತಿ ಮತ್ತು ಅಮೃತತ್ವದೆಡೆಗೆ’ ಗೀತರೂಪಕಗಳು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಡಾ.ಡಿ. ಸದಾಶಿವ ಭಟ್ಟ ಪಳ್ಳು ಜೀವನದಲ್ಲಿ ಅಳಡಿಸಿಕೊಂಡ ಶಿಸ್ತು ಅವರ ಬರವಣಿಗೆಯಲ್ಲಿ ಪ್ರತಿಬಿಂಬಿಸುತ್ತದೆ ಎಂದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್., ಕೋಶಾಧಿಕಾರಿ ಶ್ರೀನಿವಾಸ ಸಾಮಂತ, ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಮತ್ತು ಮೊಕ್ತೇಸರ ವಿನೋದ್ ಕುಮಾರ್ ರೈ, ಶ್ರೀ ಮಹಾಲಿಂಗೇಶ್ವ ಯಕ್ಷಗಾನ ಕಲಾ ಸಂಘ ಗೌರವಾಧ್ಯಕ್ಷ ಸಂಜೀವ ರೈ, ಉಪಸ್ಥಿತರಿದ್ದರು.ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿದರು. ಸೌರಭ ಪ್ರಸಾರಾಂಗ ನಿರ್ದೇಶಕ ಡಾ. ಮನಮೋಹನ್ ಎಂ. ವಂದಿಸಿದರು. ವಿದ್ಯಾರ್ಥಿನಿ ಧನ್ಯಶ್ರೀ, ದಾಮೋದರ ಮತ್ತು ಗ್ರೀಷ್ಮಾ ಪಾಣಾಜೆ ನಿರೂಪಿಸಿದರು.