ಮುರಗೋಡ ಗ್ರಾಮದ ಸರಹದ್ದಿನ ಸರ್ಕಾರಿ ಜಮೀನಿನಲ್ಲಿ 2024ರಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಪಾರ ಪ್ರಮಾಣದ ಕಲ್ಲು, ಮಣ್ಣು ಹಾಗೂ ಗರಸು ಸಾಗಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮುರಗೋಡ ಗ್ರಾಮದ ಸರಹದ್ದಿನ ಸರ್ಕಾರಿ ಜಮೀನಿನಲ್ಲಿ 2024ರಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಪಾರ ಪ್ರಮಾಣದ ಕಲ್ಲು, ಮಣ್ಣು ಹಾಗೂ ಗರಸು ಸಾಗಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಆರೋಪಿಸಿದರು.

ನಗರದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರಗೋಡ ಗ್ರಾಮದ ಸರ್ವೆ ನಂ.613ರ 46 ಎಕರೆ ಹಾಗೂ ಸರ್ವೆ ನಂ.855ರ 11 ಎಕರೆ ಸರ್ಕಾರಿ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ಅನಧಿಕೃತವಾಗಿ ಕಡಿದು ಸಾಗಿಸಲಾಗಿದೆ. ಸುಮಾರು 15- 16 ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿದು ಪರಿಸರಕ್ಕೆ ಹಾನಿ ಮಾಡಲಾಗಿದೆ. 2024ರ ಜುಲೈ 22ರಂದು ಸಾರ್ವಜನಿಕರು ತಹಶೀಲ್ದಾರ್ ಹಾಗೂ ಮುರಗೋಡ ಸಿಪಿಐಗೆ ದೂರು ಸಲ್ಲಿಸಿದ್ದರು. ಬಳಿಕ ಕಂದಾಯ, ಅರಣ್ಯ ಹಾಗೂ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರೂ, ಮರ ಕಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ದೂರಿದರು.ಕಳೆದ ಎರಡು ವರ್ಷಗಳಿಂದ ಸರ್ಕಾರಿ ಜಮೀನಿನಿಂದ ಪ್ರತಿದಿನ ನೂರಾರು ಲಾರಿಗಳಲ್ಲಿ ಕಲ್ಲು, ಮಣ್ಣು ಹಾಗೂ ಗರಸು ಸಾಗಿಸಲಾಗುತ್ತಿದೆ. ಹಲಕಿ ಗ್ರಾಮದ ಬಳಿಯ ಪ್ರಥಮೇಶ ಎಂ-ಸ್ಯಾಂಡ್, ಪ್ರಿನ್ಸ್ ಎಂ-ಸ್ಯಾಂಡ್ ಸಮೀಪ ಹಾಗೂ ರಾಮಾಪುರ ರಸ್ತೆಯ ಬದಿಯ ಸರ್ಕಾರಿ ಗಾಯರಾಣ ಜಮೀನಿನಲ್ಲಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದರು.ಸ್ಥಳ ಪರಿಶೀಲನೆ ವೇಳೆ ಸುಮಾರು 50–60 ಅಡಿ ಆಳದ ತೆಗ್ಗು ನಿರ್ಮಾಣವಾಗಿರುವುದು ಕಂಡುಬಂದಿದೆ. ಎರಡು ಹಿಟಾಚಿ ಹಾಗೂ 12 ಟಿಪ್ಪರ್‌ಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದ್ದು, ಅವುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.ಮನವಿ ಬಳಿಕ ಉಗ್ರ ಹೋರಾಟ:

2024ರಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ. ಬೃಹತ್ ಯಂತ್ರಗಳನ್ನು ಬಳಸಿ ಗುಡ್ಡವನ್ನು ಬ್ಲಾಸ್ಟ್ ಮಾಡಿ ನಾಶಪಡಿಸಲಾಗಿದೆ. ಈ ಕುರಿತು ಸಂಪೂರ್ಣ ಸಾಕ್ಷಿಗಳ ಮಾಹಿತಿ ಕಲೆ ಹಾಕಲಾಗಿದೆ. ಈ ಅಕ್ರಮ ಗಣಿಗಾರಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಅಧಿಕಾರಿಗಳ ವಿರುದ್ಧವೂ ಗಂಭೀರ ಆರೋಪ ಮಾಡಿದರು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಕ್ರಮ ಕೈಗೊಳ್ಳದಿದ್ದರೆ ನಾಲ್ಕೈದು ದಿನಗಳಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಿ, ಉಗ್ರ ಹೋರಾಟ ನಡೆಸಲಾಗುವುದು. ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ, ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಶ್ರೀಶೈಲ ಯಡಳ್ಳಿ, ಗುರು ಮೆಟಗುಡ್ಡ, ಗುರುಪಾದ ಕಳ್ಳಿ, ಸಚಿನ ದೇಸಾಯಿ, ಸಚಿನ್‌ ಕಡಿ, ಪ್ರವೀಣ ಶಿಂಗಾರಿ, ಸುಭಾಸ ತುರಮರಿ, ಚಂದನ ಕೌಜಲಗಿ, ಸುಭಾಸ ಬಾಗೇವಾಡಿ, ಸುನೀಲ ವರ್ಣೇಕರ, ಮೋಹನ ವಕ್ಕುಂದ, ಆನಂದ ಮೂಗಿ, ರಾಮು ರಜಪೂತ ಸೇರಿದಂತೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರು ಇದ್ದರು‌.