ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯ: ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಕಾಶ್

KannadaprabhaNewsNetwork | Published : Jun 28, 2024 12:57 AM

ಸಾರಾಂಶ

ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗಳೆಡೆ ಆಸಕ್ತಿ ತೋರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಪ್ರತಿ ಹಳ್ಳಿಗೊಂದು ಸರ್ಕಾರಿ ಶಾಲೆಗಳನ್ನು ತೆರೆದಿದೆ ಹಾಗೂ ಗುಣಮಟ್ಟದ ಶಿಕ್ಷಕರನ್ನೂ ಸಹ ನೀಡಿದೆ, ಆದರೂ ಸಹ ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ ಪಾಠ, ಪ್ರವಚನಗಳು ನಡೆಯುತ್ತವೆ. ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರ ಬಹು ಮುಖ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತ ಎಸ್. ಪ್ರಕಾಶ್ ತಿಳಿಸಿದ್ದಾರೆ.

ತಾಲೂಕಿನ ಬಾಗೂರು ಹೋಬಳಿ ಬಿದರೆ ಗ್ರಾಮದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಮತ್ತು ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ಪಾಠ- ಪ್ರವಚನಗಳು ನಡೆಯುತ್ತವೆ. ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರ ಬಹುಮುಖ್ಯವಾಗಿದೆ . ವೇದಿಕೆ ಮೇಲೆ ಕುಳಿತಿರುವವರು ಎಲ್ಲರೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿದವರೇ ಹಾಗೂ ಉನ್ನತ ಹುದ್ದೆಗಳನ್ನೂ ಅಲಂಕರಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗಳೆಡೆ ಆಸಕ್ತಿ ತೋರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಪ್ರತಿ ಹಳ್ಳಿಗೊಂದು ಸರ್ಕಾರಿ ಶಾಲೆಗಳನ್ನು ತೆರೆದಿದೆ ಹಾಗೂ ಗುಣಮಟ್ಟದ ಶಿಕ್ಷಕರನ್ನೂ ಸಹ ನೀಡಿದೆ, ಆದರೂ ಸಹ ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಾ ಬಂದಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ತಮ್ಮ ಅಕ್ಕ ಪಕ್ಕದ ಮಕ್ಕಳನ್ನು ತಮ್ಮ ಶಾಲೆಗಳ ಸೌಕರ್ಯಗಳ ಬಗ್ಗೆ ತಿಳಿಸಿ ಅವರನ್ನು ಶಾಲೆಗೆ ಕರೆತರಲು ಸಹಕರಿಸಿ ಎಂದರು.

ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ಸಂಘದ ಅಧ್ಯಕ್ಷ ರವೀಂದ್ರ ಮಾತನಾಡಿ, ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಪ್ರತಿವರ್ಷವೂ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ ಇವುಗಳ ಬಗ್ಗೆಯೂ ಕೂಡ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು.

ಬಿದರೆ ಗ್ರಾಮದ ಉದ್ಯಮಿ ನಾಗರಾಜು ಮಾತನಾಡಿ, ನಾವು ಓದಿದ ಶಾಲೆ, ನಮಗೆ ಪಾಠ ಮಾಡಿದ್ದ ಗುರುಗಳನ್ನು ಎಂದಿಗೂ ಮರೆಯಬಾರದು. ಆದ್ದರಿಂದ ನಾನು ಪ್ರತಿವರ್ಷವೂ ಕೂಡ ನನ್ನ ಕೈಲಾದ ಅಳಿಲು ಸೇವೆಯನ್ನು ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಮಾಡುತ್ತಾ ಬಂದಿದ್ದೇನೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಕಳುಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಕೃಷ್ಣೇಗೌಡ, ಗುತ್ತಿಗೆದಾರ ನಾಗರಾಜ್, ಜನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಶಾಲೆಯ ಮುಖ್ಯೋಪಾಧ್ಯಯ ಧನಂಜಯ. ಶ್ರೀನಿವಾಸ್. ಜಗದೀಶ್ ಮತ್ತಿತರರಿದ್ದರು.

Share this article