- ಹನಗವಾಡಿ ಗ್ರಾಪಂನಲ್ಲಿ ದೊಗ್ಗಳ್ಳಿ ನಿವೇಶನರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಹರಿಹರ ಕ್ಷೇತ್ರ ಶಾಸಕ - - - ಕನ್ನಡಪ್ರಭ ವಾರ್ತೆ ಹರಿಹರ ಸರ್ಕಾರ ವಸತಿಗಳನ್ನು ಮಂಜೂರು ಮಾಡಿದರೆ ಹಕ್ಕುಪತ್ರ ಪಡೆದ ದೊಗ್ಗಳ್ಳಿ ಗ್ರಾಮದ ನಿವೇಶನರಹಿತ ಕುಟುಂಬಗಳಿಗೆ ಗುಂಪಾಗಿ ವಸತಿಗಳನ್ನು ನೀಡಲು ಶ್ರಮಿಸುತ್ತೇನೆ ಎಂದು ಶಾಸಕ ಬಿ.ಪಿ.ಹರೀಶ್ ಭರವಸೆ ನೀಡಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಗ್ರಾ.ಪಂ. ಸದಸ್ಯರು, ಶಾಸಕರು ಹಾಗೂ ಸಚಿವರಿಗೂ ಅನುದಾನ ಬಾರದೇ ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿಯುತ್ತಿವೆ. ಗ್ಯಾರಂಟಿಗಳನ್ನು ಕೈಬಿಟ್ಟು ರಾಜ್ಯದ ಅಭಿವೃದ್ಧಿಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ರಾಜ್ಯವು ಅಭಿವೃದ್ಧಿಯಲ್ಲಿ ೩೦ ವರ್ಷ ಹಿಂದೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗದಲ್ಲಿನ ಗ್ರಾಮ ಠಾಣಾ ರಚನೆಯಾಗಿ ಅನೇಕ ವರ್ಷಗಳಾಗಿವೆ. ತದನಂತರ ಗ್ರಾಮಗಳು ಬೃಹದಾಕಾರವಾಗಿ ಬೆಳೆದಿವೆ. ಲಕ್ಷಾಂತರ ಕುಟುಂಬಗಳಿಗೆ ಗ್ರಾಮ ಠಾಣೆಗೆ ಸೇರಲು ಸಾಧ್ಯವಾಗಿಲ್ಲ. ಈ ಕುರಿತು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ನೂತನ ಗ್ರಾಮ ಠಾಣಾ ರಚನೆ ಮಾಡುವಂತೆ ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ ಎಂದು ಹೇಳಿದರು.ಗ್ರಾಪಂ ಸದಸ್ಯ ಪ್ರವೀಣ್ ಆರ್.ಬಿ. ಮಾತನಾಡಿ, ಹನಗವಾಡಿ, ಹರಗನಹಳ್ಳಿ, ದೊಗ್ಗಳ್ಳಿ ಗ್ರಾಮಗಳಲ್ಲಿ ಇನ್ನೂ ಅನೇಕ ನಿವೇಶನರಹಿತ ಕುಟುಂಬಗಳು ಜೀವನ ಸಾಗಿಸುತ್ತಿವೆ. ಅವರಿಗೂ ಸ್ಥಳ ಗುರುತಿಸಿ ನಿವೇಶನ ನೀಡಬೇಕು. ಏಪ್ರಿಲ್‌ನಲ್ಲಿ ಬರಬೇಕಾದ ೧೫ನೇ ಹಣಕಾಸಿನ ಅನುದಾನ ಇದುವರೆಗೂ ಬಂದಿಲ್ಲ. ಕಳೆದೆರಡು ವರ್ಷಗಳಿಂದ ಗ್ರಾ.ಪಂ.ಗಳಿಗೆ ಒಂದು ಮನೆಯೂ ಬಂದಿಲ್ಲ. ಈ ಕುರಿತು ಅಧಿವೇಶನದ ಗಮನ ಸೆಳೆಯುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ದೊಗ್ಗಳ್ಳಿ ಗ್ರಾಮದ ೨೫ ನಿವೇಶನರಹಿತ ಕುಟುಂಬಗಳಿಗೆ ಶಾಸಕ ಬಿ.ಪಿ.ಹರೀಶ್ ಹಕ್ಕುಪತ್ರ ವಿತರಿಸಿದರು. ತಾಪಂ ಇಒ ರಾಮಕೃಷ್ಣಪ್ಪ, ವಾಸುದೇವ್, ಪಿಡಿಒ ಪ್ರಭಾಕರ್, ಎಸ್.ಡಿ.ಎ. ಶಿವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್. ತಿಪ್ಪೇಶ್, ಮಾಜಿ ಅಧ್ಯಕ್ಷರಾದ ಸವಿತಾ, ಲಕ್ಷ್ಮವ್ವ, ಸದಸ್ಯರಾದ ಸುಜಾತಾ, ಪುಷ್ಪಾ, ಡಿ.ಎಸ್. ಹನುಮಂತಪ್ಪ, ಮುಖಂಡರಾದ ಡಿ.ಎಸ್. ಗಿರೀಶ್, ಪ್ರಮೋದ್ ಬಣಕಾರ್, ಕೆ.ಶೇಖರಪ್ಪ, ವಾಮದೇವ್, ನಾಗರಾಜ್, ವಿಜಯ್, ವಿಎಸ್‌ಎಸ್ ಅಧ್ಯಕ್ಷ ಬಸವರಾಜ್, ಶಂಭುಲಿಂಗಪ್ಪ, ರಾಟಿ ಹನುಮಂತಪ್ಪ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.- - - -೨೦ಎಚ್‌ಆರ್‌ಆರ್೧:
ಹರಿಹರ ತಾಲೂಕಿನ ಹನಗವಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಶಾಸಕ ಬಿ.ಪಿ.ಹರೀಶ ಅವರು ನಿವೇಶನರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದರು.