ದುಶ್ಚಟ ತೊರೆದು ಹೊಸ ಬದುಕಿನತ್ತ ಹೆಜ್ಜೆಯಿಡಿ

KannadaprabhaNewsNetwork |  
Published : Jul 13, 2026, 01:15 AM IST
ಪೋಟೊ12ಕೆಎಸಟಿ3: ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ನಡೆದ 2083ನೇ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಹೇಶ ಹಡಪದ ಮಾರ್ಗದರ್ಶನ ನೀಡಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮದ್ಯದ ವ್ಯಸನದಿಂದ ಅನೇಕ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿವೆ

ಕುಷ್ಟಗಿ: ಮದ್ಯದ ದುಶ್ಚಟ ವ್ಯಕ್ತಿಯ ಬದುಕನ್ನು ಮಾತ್ರವಲ್ಲ, ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿರತೆ ಹಾಗೂ ಸಮಾಜದ ಶಾಂತಿ ಹಾಳು ಮಾಡುವ ಗಂಭೀರ ಸಾಮಾಜಿಕ ಪಿಡುಗಾಗಿದೆ. ಆದ್ದರಿಂದ ಮದ್ಯದಂತಹ ದುಶ್ಚಟ ತೊರೆದು ಆತ್ಮವಿಶ್ವಾಸದಿಂದ ಹೊಸ ಬದುಕಿನತ್ತ ಹೆಜ್ಜೆಯಿಡಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಮಹೇಶ ಹಡಪದ ಕರೆ ನೀಡಿದರು.

ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ.ಟ್ರಸ್ಟ್) ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 2083ನೇ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮದ್ಯದ ವ್ಯಸನದಿಂದ ಅನೇಕ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿವೆ. ದುಡಿದು ಸಂಪಾದಿಸಿದ ಹಣ ಮದ್ಯಕ್ಕೆ ವ್ಯಯವಾಗುವುದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದು, ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಪ್ರತಿಯೊಬ್ಬರೂ ದೃಢ ಸಂಕಲ್ಪದೊಂದಿಗೆ ವ್ಯಸನಮುಕ್ತ ಜೀವನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ದಶಕಗಳಿಂದ ಮದ್ಯವರ್ಜನೆ ಶಿಬಿರದ ಮೂಲಕ ಸಾವಿರಾರು ಕುಟುಂಬ ವ್ಯಸನದ ಸಂಕೋಲೆಯಿಂದ ಮುಕ್ತಗೊಳಿಸಿ ಹೊಸ ಬದುಕಿನತ್ತ ಕೊಂಡೊಯ್ಯುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿ ಆರೋಗ್ಯಕರ ಸಾಮಾಜಿಕ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿವೆ ಎಂದು ಹೇಳಿದರು.

ಮದ್ಯಪಾನ ತ್ಯಜಿಸುವ ನಿರ್ಧಾರ ಕೆಲ ದಿನಗಳ ಸಂಕಲ್ಪವಾಗಿ ನೋಡದೆ, ಜೀವನಪರ್ಯಂತ ಪಾಲಿಸಬೇಕಾದ ಬದ್ಧತೆಯಾಗಿ ಸ್ವೀಕರಿಸಬೇಕು. ಆತ್ಮಸ್ಥೈರ್ಯ, ಕುಟುಂಬದ ಪ್ರೋತ್ಸಾಹ ಹಾಗೂ ಸಮಾಜದ ಸಹಕಾರ ಇದ್ದರೆ ಯಾವುದೇ ವ್ಯಕ್ತಿ ವ್ಯಸನದಿಂದ ಹೊರಬಂದು ಯಶಸ್ವಿ ಜೀವನ ನಡೆಸಬಹುದು. ವ್ಯಸನಮುಕ್ತ ವ್ಯಕ್ತಿ ತನ್ನ ಕುಟುಂಬಕ್ಕೂ ಸಮಾಜಕ್ಕೂ ಮಾದರಿಯಾಗುತ್ತಾನೆ. ಯುವಜನತೆ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣ,ಕೌಶಲ್ಯಾಭಿವೃದ್ಧಿ ಹಾಗೂ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವಿಠ್ಠಲ ಪೂಜಾರಿ, ಅರುಣಕುಮಾರ, ನಿಂಗಪ್ಪ, ರಾಘವೇಂದ್ರ ಸೇರಿದಂತೆ ಅನೇಕರು ಇದ್ದರು. ಒಟ್ಟು 76 ಜನ ಶಿಬಿರಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾನಗರ ಪಾಲಿಕೆಯ ಆರಂಭ ಶೂರತ್ವ; ಮತ್ತೆ ಫುಟ್‌ಪಾತ್ ಅತಿಕ್ರಮಣ ಮಾಡಿದ ವ್ಯಾಪಾರಿಗಳು
ವರ್ತಮಾನದ ಅರಿವಿನಿಂದ ವ್ಯಕ್ತಿತ್ವ ವಿಕಸನ: ಯಮುನಾ ಶ್ರೀನಿಧಿ