ವ್ಯವಸಾಯೋತ್ಪನ್ನ ಸಂಘದ ಉಪಾಧ್ಯಕ್ಷೆ, ಪ್ರಭಾರ ಅಧ್ಯಕ್ಷೆಯಾಗಿ ಆರ್.ಎ.ಗೀತಾ ಗೋವಿಂದ ಆಯ್ಕೆ

KannadaprabhaNewsNetwork | Published : May 11, 2025 1:18 AM
Follow Us

ಸಾರಾಂಶ

ಈ ಹಿಂದಿನ ಡಿ.ಬಿ.ರಾಜಯ್ಯರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗೀತಾ ಹೊರತುಪಡಿಸಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಗೀತಾ ಗೋವಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಹಕಾರ ಇಲಾಖೆಯ ಅಧೀಕ್ಷಕ ಹಾಗೂ ಚುನಾವಣಾಧಿಕಾರಿ ಜಿ.ಆರ್.ಜಗದೀಶ್ ಪ್ರಕಟಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷೆ ಹಾಗೂ ಪ್ರಭಾರ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಕಲ್ಲುಕೊಂಬರಿ ಗ್ರಾಮದ ಆರ್.ಎ.ಗೀತಾ ಗೋವಿಂದ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಡಿ.ಬಿ.ರಾಜಯ್ಯರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗೀತಾ ಹೊರತುಪಡಿಸಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಗೀತಾ ಗೋವಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಹಕಾರ ಇಲಾಖೆಯ ಅಧೀಕ್ಷಕ ಹಾಗೂ ಚುನಾವಣಾಧಿಕಾರಿ ಜಿ.ಆರ್.ಜಗದೀಶ್ ಪ್ರಕಟಿಸಿದರು.

ಸಂಸ್ಥೆ ಅಧ್ಯಕ್ಷ ಎಚ್.ಎನ್.ಗಿರೀಶ್ ಸಲ್ಲಿಸಿರುವ ರಾಜೀನಾಮೆ ಪತ್ರ ಮೇ 8ರಂದು ಅಂಗೀಕೃತವಾದ ಹಿನ್ನೆಲೆಯಲ್ಲಿ ಟಿಎಪಿಸಿಎಂಎಸ್‌ನ ಪ್ರಭಾರ ಅಧ್ಯಕ್ಷೆಯಾಗಿಯೂ ಕೂಡ ಗೀತಾ ಗೋವಿಂದ ಅಧಿಕಾರ ಸ್ವೀಕರಿಸಿದರು. ಇದರಿಂದ ಪ್ರಭಾರ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಎರಡೂ ಸ್ಥಾನವನ್ನೂ ಒಬ್ಬರೇ ನಿಭಾಯಿಸುವ ಸೌಭಾಗ್ಯ ಗೀತಾ ಅವರಿಗೆ ಲಭಿಸಿದಂತಾಗಿದೆ.

ತೆರವಾಗಿದ್ದ ಸ್ಥಾನಕ್ಕೆ ಕೋಪ್:

ಸಂಸ್ಥೆ ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡರ ನಿರ್ದೇಶಕ ಸ್ಥಾನ ರದ್ದಾಗಿರುವ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜೆ.ಪಿ.ಉಮೇಶ್ ಅವರನ್ನು ಕೋಪ್ ಮಾಡಿಕೊಳ್ಳಲಾಯಿತು.

ನೂತನ ಉಪಾಧ್ಯಕ್ಷೆ ಮತ್ತು ಪ್ರಭಾರ ಅಧ್ಯಕ್ಷೆ ಗೀತಾ ಅವರಿಗೆ ಮಾಜಿ ಉಪಾಧ್ಯಕ್ಷ ಡಿ.ಬಿ.ರಾಜಯ್ಯ ಅಧಿಕಾರ ಹಸ್ತಾಂತರಿಸಿದರು. ಸಂಘದ ಕಾರ್ಯದರ್ಶಿ ಎಂ.ಕೆ.ಮೋಹನ್‌ರಾಜ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಅವಿರೋಧ ಆಯ್ಕೆಯಾಗುತ್ತಿದ್ದಂತೆ ಸಂಘದ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಈ ವೇಳೆ ನೂತನ ಉಪಾಧ್ಯಕ್ಷೆ ಗೀತಾ ಮಾತನಾಡಿ, ತಾಲೂಕಿನ ರೈತರ ಹಿತಕಾಯುವ ಸಲುವಾಗಿ ಹಿರಿಯ ಸಹಕಾರಿ ಟಿ.ಎನ್.ಮಾದಪ್ಪಗೌಡರು ಸ್ಥಾಪಿಸಿರುವ ಈ ಸಂಸ್ಥೆಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಸಂಘದ ಮೂಲಕ ಸಿಗಬಹುದಾದ ಸರ್ಕಾರದ ಸವಲತ್ತುಗಳನ್ನು ಸದಸ್ಯತ್ವ ಹೊಂದಿರುವ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಸಂಘದ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ, ಆಡಳಿತಮಂಡಳಿಯ ಎಲ್ಲ ನಿರ್ದೇಶಕರ ಮತ್ತು ಹಿರಿಯ ಸಹಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ಕ್ರಮವಹಿಸಲಾಗುವುದು. ಈ ಸಂಸ್ಥೆ ಜವಾಬ್ದಾರಿ ವಹಿಸಿರುವ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಈ ವೇಳೆ ಸಂಸ್ಥೆ ಮಾಜಿ ಅಧ್ಯಕ್ಷರಾದ ಎಚ್.ಎನ್.ಗಿರೀಶ್, ತಿಮ್ಮಪ್ಪ, ಎಸ್.ಸಿ.ಚೇತನ್‌ಕುಮಾರ್, ನಿರ್ದೇಶಕರಾದ ಸವಿತಾ ರಾಮು, ಆಶಾ, ಚಿಕ್ಕಮ್ಮ, ಸರ್ಕಾರಿ ನಾಮನಿರ್ದೇಶಿತ ಸದಸ್ಯ ಮೋಹನ್‌ಕುಮಾರ್, ಮುಖಂಡರಾದ ತ್ಯಾಪೇನಹಳ್ಳಿ ಶ್ರೀನಿವಾಸ್, ರವಿಕಾಂತೇಗೌಡ, ಗೋವಿಂದ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.