ರವೀಂದ್ರನಾಥ ಠಾಕೂರ ಕವಿಯಷ್ಟೇ ಅಲ್ಲ, ಬಹುಮುಖ ಪ್ರತಿಭೆ

KannadaprabhaNewsNetwork |  
Published : May 11, 2026, 02:15 AM IST
ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪ್ರಹ್ಲಾದ ನರೇಗಲ್ ಮಾಸ್ತರ ದತ್ತಿ ಹಾಗೂ ರವೀಂದ್ರನಾಥ ಠಾಕೂರ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕವಿ ರವೀಂದ್ರನಾಥ ಠಾಕೂರ ಬಾಲ್ಯದಿಂದಲೇ ಕಾವ್ಯ ರಚನೆಯಲ್ಲಿ ಆಸಕ್ತಿ ಹೊಂದಿದ್ದರು. 5000 ಕವನ, 24 ನಾಟಕ, 12 ಕಾದಂಬರಿ ರಚಿಸಿದ್ದಲ್ಲದೆ ಅನೇಕ ಸಣ್ಣ ಕಥೆ, ಪ್ರಬಂಧ ರಚಿಸಿ ಬಂಗಾಲಿ ಸಾಹಿತಿಗಳ ಗಮನ ಸೆಳೆದರು.

ಧಾರವಾಡ:

ರವೀಂದ್ರನಾಥ ಠಾಕೂರ ವಿಶ್ವ ಕವಿಯಾಗಿದ್ದರೂ ಅವರ ಕಾರ್ಯಕ್ಷೇತ್ರವು ಕಾವ್ಯ ರಚನೆಗೆ ಸೀಮಿತವಾಗದೇ ಅವರು ಪ್ರಸಿದ್ಧ ನಾಟಕಕಾರರೂ, ಒಳ್ಳೆ ನಟರು, ಚಿತ್ರ ಕಲಾವಿದರು, ಅನುವಾದಕರು, ಸಂಗೀತಗಾರರೂ ಆಗಿದ್ದರು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರಹ್ಲಾದ ನರೇಗಲ್ ಮಾಸ್ತರ ದತ್ತಿ ಹಾಗೂ ರವೀಂದ್ರನಾಥ ಠಾಕೂರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕವಿ ರವೀಂದ್ರನಾಥ ಠಾಕೂರ ಬಾಲ್ಯದಿಂದಲೇ ಕಾವ್ಯ ರಚನೆಯಲ್ಲಿ ಆಸಕ್ತಿ ಹೊಂದಿದ್ದರು. 5000 ಕವನ, 24 ನಾಟಕ, 12 ಕಾದಂಬರಿ ರಚಿಸಿದ್ದಲ್ಲದೆ ಅನೇಕ ಸಣ್ಣ ಕಥೆ, ಪ್ರಬಂಧ ರಚಿಸಿ ಬಂಗಾಲಿ ಸಾಹಿತಿಗಳ ಗಮನ ಸೆಳೆದರು.

1912ರಲ್ಲಿ ಬಂಗಾಳದ ಕವನ ಸಂಕಲನಗಳಿಂದ ಆಯ್ದ ಕೆಲವು ಗೀತೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿ `ಗೀತಾಂಜಲಿ’ ಎಂಬ ಹೆಸರಿನಿಂದ ಪ್ರಕಟಿಸಿದರು. ಈ ಗ್ರಂಥಕ್ಕೆ 1913ರಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ದೊರಕಿತು. ರವೀಂದ್ರರ ಹೆಸರು ವಿಶ್ವವಿಖ್ಯಾತವಾಯಿತು. ರವೀಂದ್ರರು ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಶಿಯನ್ ಎಂದು ಪ್ರಸಿದ್ಧಿ ಪಡೆದರು. ಭಾರತ ಹಾಗೂ ಬಾಂಗ್ಲಾ ದೇಶಗಳ ರಾಷ್ಟ್ರಗೀತೆಗಳನ್ನು ಬರೆದ ಹೆಗ್ಗಳಿಕೆ ಇವರದಾಗಿದೆ ಎಂದರು.

ಮಹಾಕವಿ, ತತ್ವಜ್ಞಾನಿ, ಶಿಕ್ಷಣ ತಜ್ಞರಾದ ಇವರು ಶಿಕ್ಷಣವು ಪರಿಸರದ ಜತೆಗೆ ಸಾಮರಸ್ಯ ಬೆಳೆಸುವಂತಿರಬೇಕೆಂಬ ಉದ್ದೇಶದಿಂದ `ಶಾಂತಿನಿಕೇತನ’ ಎಂಬ ಶಾಲೆ ಪ್ರಾರಂಭಿಸಿದರು. ಅದುವೇ ಇಂದು ಪ್ರಸಿದ್ಧ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. `ಶಾಂತಿನಿಕೇತನ’ ಹೆಸರಿಗೆ ತಕ್ಕಂತೆ ಶಾಂತಿಯ ತಾಣವಾಗಿತ್ತು. ಇಲ್ಲಿ ಮಕ್ಕಳು ಯಾವುದೇ ಬಂಧನವಿಲ್ಲದೆ ಪರಿಸರದ ಮಧ್ಯೆ ಅಧ್ಯಯನ ಮಾಡುವಂತಿತ್ತು. ಮಹಾತ್ಮ ಗಾಂಧೀಜಿ ಅವರ ಒಳ್ಳೆಯ ಅವಿನಾಭಾವ ಸಂಬಂಧ ಹೊಂದಿದ್ದ ಅವರಿಗೆ ಕೆಲವು ವಿಚಾರಗಳಲ್ಲಿ ಭಿನ್ನತೆ ಇತ್ತು. ಆದರೂ ಇಬ್ಬರೂ ಪರಸ್ಪರ ಗೌರವ ಭಾವನೆ ಹೊಂದಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಹರ್ಷ ಡಂಬಳ, ಪ್ರಹ್ಲಾದ ನರೇಗಲ್ ಹಾಗೂ ಕವಿ ರವೀಂದ್ರನಾಥರು ನಮಗೆ ಪ್ರಾತಃಸ್ಮರಣೀಯರು. ಇಂದಿನ ವಿದ್ಯಾರ್ಥಿಗಳು ರವೀಂದ್ರನಾಥ ಠಾಕೂರ ಅವರ ಸಾಹಿತ್ಯ ಓದಬೇಕು ಎಂದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಬಸವಪ್ರಭು ಹೊಸಕೇರಿ, ಎಂ.ಎಂ. ಚಿಕ್ಕಮಠ. ಸಂಧ್ಯಾ ಅರಭಟ್ಟ, ಶೈಲಾ ಕರಗುದರಿ, ಪ್ರತಿಭಾ ಕುಲಕರ್ಣಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛತೆ ಒಂದು ದಿನದ ಆಲೋಚನೆಯಾಗದಿರಲಿ
ಆಧ್ಯಾತ್ಮದ ರತ್ನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ