ಮಾಗಡಿ ವ್ಯಾಪ್ತಿಯಲ್ಲಿ ಕೈಕೊಟ್ಟ ಮಳೆಯಿಂದ ಒಣಗುತ್ತಿರುವ ರಾಗಿ ಬೆಳೆ

KannadaprabhaNewsNetwork |  
Published : Sep 17, 2026, 01:45 AM IST
4.ರಾಗಿ ಬೆಳೆ ಬಾಡಿ ಒಣಗುತ್ತಿರುವುದು. | Kannada Prabha

ಸಾರಾಂಶ

ವಾಡಿಕೆಯಂತೆ ಸುರಿಯಬೇಕಿದ್ದ ಮುಂಗಾರು ಮಳೆ ಕೈಕೊಟ್ಟಾಗ ರೈತ ಬಿತ್ತನೆ ಆಸೆಯನ್ನೇ ಬಿಟ್ಟಿದ್ದ. ಇದ್ದಕಿದ್ದಂತೆ ಮಳೆರಾಯ ತಡವಾಗಿ ಕರುಣೆ ತೋರಿದ. ಇದರಿಂದ ಉತ್ಸಾಹಗೊಂಡ ರೈತರು ಸಾಲಸೋಲ ಮಾಡಿ ಮತ್ತೆ ಉಳುಮೆ ಮಾಡಿ ಬಿತ್ತನೆ ಮಾಡಿದರು. ಹೊಲಗಳೆಲ್ಲವೂ ಹಸಿರಾದವು. ಅಂಗಡಿಗಳ ಮುಂದೆ ಸರದಿಯಲ್ಲಿ ನಿಂತು ಗೊಬ್ಬರ ತಂದರು. ಆದರೆ ಆಗಿದ್ದೇನು? ಮತ್ತೆ ಮಳೆ ಕೈಕೊಟ್ಟಿತು. ಇಲ್ಲ ಈ ಬಾರಿ ನಾನು ಮುಂಗಾರಿಗೆ ಬರಲ್ಲ ಎಂದು ಮಳೆರಾಯ ಸಂದೇಶ ನೀಡಿದಂತೆ ಬೇಸಿಗೆಯಂತೆ ಬಿರುಬಿಸಿಲು ಆರಂಭವಾಗಿ ಹಸಿರಾಗಿದ್ದ ಹೊಲಗಳೆಲ್ಲವೂ ಒಣಗಲಾರಂಭಿಸಿವೆ. ಇದರಿಂದ ರೈತ ಹತಾಶೆಯಿಂದ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಕನ್ನಡಪ್ರಭ ವಾರ್ತೆ ಕುದೂರು

ಈ ಬಾರಿ ರೈತನ ನಿರೀಕ್ಷೆಯನ್ನು ಮುಂಗಾರು ಮಳೆ 2ನೇ ಬಾರಿಯೂ ಹುಸಿಗೊಳಿಸಿದೆ. ರಾಗಿ ಬೆಳೆ ಸಂಪೂರ್ಣ ಒಣಗತೊಡಗಿವೆ. ರಾಜ್ಯದಲ್ಲಿ ಎಲ್ಲಿಯೇ ಬರ ಬಂದರೂ ಹಿಡಿ ರಾಗಿಯಷ್ಟಾದರೂ ಮಾಗಡಿ ಪ್ರಾಂತ್ಯದಲ್ಲಿ ಬೆಳೆಯಲಾಗುತ್ತದೆ ಎಂಬ ಮಾತು ಸುಳ್ಳಾಗುತ್ತದೆಯೇನೋ ಎಂಬ ಆತಂಕ ಆರಂಭವಾಗಿದೆ.

ವಾಡಿಕೆಯಂತೆ ಸುರಿಯಬೇಕಿದ್ದ ಮುಂಗಾರು ಮಳೆ ಕೈಕೊಟ್ಟಾಗ ರೈತ ಬಿತ್ತನೆ ಆಸೆಯನ್ನೇ ಬಿಟ್ಟಿದ್ದ. ಇದ್ದಕಿದ್ದಂತೆ ಮಳೆರಾಯ ತಡವಾಗಿ ಕರುಣೆ ತೋರಿದ. ಇದರಿಂದ ಉತ್ಸಾಹಗೊಂಡ ರೈತರು ಸಾಲಸೋಲ ಮಾಡಿ ಮತ್ತೆ ಉಳುಮೆ ಮಾಡಿ ಬಿತ್ತನೆ ಮಾಡಿದರು. ಹೊಲಗಳೆಲ್ಲವೂ ಹಸಿರಾದವು. ಅಂಗಡಿಗಳ ಮುಂದೆ ಸರದಿಯಲ್ಲಿ ನಿಂತು ಗೊಬ್ಬರ ತಂದರು. ಆದರೆ ಆಗಿದ್ದೇನು? ಮತ್ತೆ ಮಳೆ ಕೈಕೊಟ್ಟಿತು. ಇಲ್ಲ ಈ ಬಾರಿ ನಾನು ಮುಂಗಾರಿಗೆ ಬರಲ್ಲ ಎಂದು ಮಳೆರಾಯ ಸಂದೇಶ ನೀಡಿದಂತೆ ಬೇಸಿಗೆಯಂತೆ ಬಿರುಬಿಸಿಲು ಆರಂಭವಾಗಿ ಹಸಿರಾಗಿದ್ದ ಹೊಲಗಳೆಲ್ಲವೂ ಒಣಗಲಾರಂಭಿಸಿವೆ. ಇದರಿಂದ ರೈತ ಹತಾಶೆಯಿಂದ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಭತ್ತ ಬೆಳೆಯಲು ನೀರಾವರಿ ಸೌಲಭ್ಯಗಳಿಲ್ಲ. ರಾಗಿಗೆ ಮಳೆರಾಯನ ಕೃಪೆ ಇಲ್ಲ. ಇದನ್ನು ಮನಗಂಡ ಕೆಲ ರೈತರು ಇರುವ ಮೇವನ್ನು ಹಿತಮಿತವಾಗಿ ಬಳಸುತ್ತಿದ್ದಾರೆ. ದವಸ ಧಾನ್ಯಗಳನ್ನು ಕಳವು ಮಾಡಿದಂತೆ ರಾಸುಗಳ ಮೇವನ್ನು ಕದಿಯುವ ದಿನ ದೂರವಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಸಾವಿರಾರು ರೈತರು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವಿಸುತ್ತಿದ್ದಾರೆ. ಆದರೆ ಮಳೆ ಇಲ್ಲದ ಕಾರಣ ಹೈನುಗಾರಿಕೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ರಾಸುಗಳ ಆಹಾರದ ಬೆಲೆಗಳು ಹೆಚ್ಚಾಗುತ್ತಿವೆ. ಮೇವನ್ನು ಕೊಂಡು ಹಾಕಿ ಹೈನುಗಾರಿಕೆ ಮಾಡಿದರೆ ಅದರಿಂದ ರೈತರು ಹೆಚ್ಚೇನು ಲಾಭ ಕಾಣಲು ಸಾಧ್ಯವಿಲ್ಲ.

ಸರ್ಕಾರ ಮೇವು ಭಾಗ್ಯ ಘೋಷಿಸಲಿ:

ಸರ್ಕಾರ ದನಕರುಗಳಿಗೆ ಮೇವುಭಾಗ್ಯ ನೀಡಲು ಪ್ರತಿ ಹಳ್ಳಿಗೂ ಡೇರಿಗಳಿಗೆ ಜವಾವ್ದಾರಿ ನೀಡಿದರೆ ಹೈನುಗಾರಿಕೆಗೆ ತೊಂದರೆಯಾಗದೆ ದನಕರುಗಳಾದರೂ ಉಳಿದುಕೊಳ್ಳುತ್ತವೆ. ಮತ್ತು ಅಲ್ಲಿನ ಪಂಚಾಯ್ತಿ ದನಕರುಗಳಿಗೆ ಅನುಕೂಲವಾಗುವಂತೆ ನೀರಿನ ಸೌಲಭ್ಯ ನೀಡುವಂತೆ ವ್ಯವಸ್ಥೆ ಮಾಡಬೇಕೆಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಠಿಣ ಸಂದರ್ಭ ಹತ್ತಿರವಿದ್ದಾಗ ತರಾತುರಿಯಲ್ಲಿ ನಿರ್ಧಾರ ಮಾಡುವ ಬದಲು ಬರಗಾಲಕ್ಕೆ ರೈತರಿಗೆ ಮತ್ತು ರಾಸುಗಳಿಗೆ ಅನುಕೂಲವಾಗುವಂತೆ ಮುನ್ನೆಚ್ಚರಿಕೆ ಕ್ರಮಗಳಿಗೆ ಈಗಿನಿಂದಲೇ ಸಿದ್ಧವಾಗಬೇಕು.

ಇದರ ನಡುವೆ ಶೇ.3ರಷ್ಟು ಕೊಳವೆಬಾವಿ ಅನುಕೂಲವಿರುವ ರೈತರು ಅಕ್ಕಪಕ್ಕದ ರೈತರಿಗೆ ಸ್ಪ್ರಿಂಕ್ಲರ್ ಮೂಲಕ ರಾಗಿ ಬೆಳೆಗೆ ನೀರು ಒದಗಿಸಿ ರಾಗಿ ಬೆಳೆ ಬೆಳೆಯಲು ಸಹಕರಿಸುತ್ತಿದ್ದಾರೆ. ಸರ್ಕಾರ ಹೊಲ ಉಳುವ ಭಾಗ್ಯಕಿಂತ ಮೇವು ನೀರು ಭಾಗ್ಯ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.

ಅಪರೂಪಕ್ಕೊಮ್ಮೆ ರೈತರ ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗುತ್ತದೆಯೇ ಹೊರತು ಉಳಿದಂತೆ ಪ್ರತಿಬಾರಿಯೂ ಎಲ್ಲಾ ರೀತಿಯಲ್ಲಿಯೂ ಅನ್ಯಾಯಕ್ಕೆ ಒಳಗಾಗುವುದು ರೈತ ಮಾತ್ರ. ರೈತ ಕೇಳುವುದು ಸಮರ್ಪಕ ವಿದ್ಯುತ್ ಮತ್ತು ನೀರು, ಬೆಳೆದ ಬೆಳೆಗೆ ಯೋಗ್ಯ ಬೆಲೆ. ಇಷ್ಟಾದರೆ ಪ್ರತಿ ರೈತನೂ ದೊಡ್ಡ ಉದ್ಯಮಿಯೇ ಆಗಿ ಮೆರೆಯುತ್ತಾನೆ. ರಾಜ್ಯದ ಬರಕ್ಕೆ ರೈತರ ಬದುಕುಗಳನ್ನು ಹಸನು ಮಾಡಲು ಸರ್ಕಾರ ಈಗಿನಿಂದಲೇ ಸಿದ್ಧವಾಗಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿಯುತವಾಗಿ ಮುಕ್ತಾಯಗೊಂಡ 108 ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ
ಪ್ರಜಾಪ್ರಭುತ್ವಕ್ಕೆ ಶಕ್ತಿ ಕೊಟ್ಟಿದ್ದೇ ಸಂವಿಧಾನ