ಕನ್ನಡಪ್ರಭ ವಾರ್ತೆ ಮಂಡ್ಯ
ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ತಾಲೂಕಿನ ವಿ.ಸಿ.ಫಾರಂನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಗಿ ಲಕ್ಷ್ಮಣಯ್ಯ ಅವರು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ತಮ್ಮ ಪರಿಶ್ರಮ, ಬದ್ಧತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಮೂಲಕ ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ರಾಗಿ ಬೆಳೆಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಅಭಿವೃದ್ಧಿಪಡಿಸಿದ ಇಂಡಾಫ್ ಸರಣಿಯ ತಳಿಗಳು ರಾಗಿ ಸಂಶೋಧನೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. ಹಿಂದೆ ಪ್ರತಿ ಎಕರೆಗೆ ಕೇವಲ ೨ ರಿಂದ ೩ ಕ್ವಿಂಟಲ್ ಉತ್ಪಾದನೆಯಷ್ಟೇ ದೊರೆಯುತ್ತಿದ್ದ ರಾಗಿ ಬೆಳೆಯನ್ನು ೮ ರಿಂದ ೧೨ ಕ್ವಿಂಟಲ್ ಉತ್ಪಾದನೆಯ ಮಟ್ಟಕ್ಕೆ ಏರಿಸುವಲ್ಲಿ ಅವರ ಸಂಶೋಧನೆ ಮಹತ್ವದ ಪಾತ್ರ ವಹಿಸಿದೆ ಎಂದರು.ಭಾರತ ಮತ್ತು ಆಫ್ರಿಕಾದ ರಾಗಿ ತಳಿಗಳ ಸಂಯೋಜನೆಯಿಂದ ಅಭಿವೃದ್ಧಿಪಡಿಸಿದ ಇಂಡಾಫ್ ಸರಣಿಯ ತಳಿಗಳು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರಿಗೆ ಅಪಾರ ಪ್ರಯೋಜನ ತಂದಿದ್ದು, ರಾಗಿ ಬೆಳೆಯ ಅಭಿವೃದ್ಧಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿವೆ. ವಿಶೇಷವಾಗಿ ಅವರ ಬಹುತೇಕ ಸಂಶೋಧನಾ ಕಾರ್ಯಗಳು ಮಂಡ್ಯದ ವಿ.ಸಿ. ಫಾರಂನಲ್ಲಿ ನಡೆದಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕರ್ನಾಟಕ ಸರ್ಕಾರವು ರಾಗಿ ಲಕ್ಷ್ಮಣಯ್ಯ ಅವರ ಜೀವನ ಮತ್ತು ಸಾಧನೆಗಳನ್ನು ಆಧರಿಸಿ ಸಾಕ್ಷ್ಯಚಿತ್ರ ನಿರ್ಮಿಸಿರುವುದು ಅವರ ಅಸಾಧಾರಣ ಕೊಡುಗೆಗಳಿಗೆ ದೊರೆತ ಗೌರವವಾಗಿದೆ. ಅವರು ಕೇವಲ ಶ್ರೇಷ್ಠ ವಿಜ್ಞಾನಿಯಷ್ಟೇ ಅಲ್ಲದೇ, ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ, ಶಿಸ್ತು, ಸರಳತೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.
ಸಾಹಿತಿ ಪ್ರೊ.ಎಂ.ನಾರಾಯಣಸ್ವಾಮಿ ಮಾತನಾಡಿ, ರಾಗಿ ಲಕ್ಷ್ಮಣಯ್ಯ ಅವರ ವ್ಯಕ್ತಿತ್ವ, ಸರಳತೆ ಹಾಗೂ ಕೃಷಿ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟಿ.ಎಂ.ಅಪರ್ಣ ಹಾಗೂ ಆರ್.ಸ್ಫೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.