ಕನ್ನಡಪ್ರಭ ವಾರ್ತೆ ರಾಮನಗರಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿರವರು ಮತಗಳ್ಳತನದ ಬದಲು ಚುನಾವಣಾ ವ್ಯವಸ್ಥೆ ಸುಧಾರಣೆಗಾಗಿ ಹೋರಾಟ ನಡೆಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಸಲಹೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಚುನಾವಣೆ ಜಾತಿ, ಹಣ ಹಾಗೂ ಅಧಿಕಾರ ಬಲದ ಮೇಲೆ ನಡೆಯುತ್ತಿದೆ. ಇದು ಸುಧಾರಣೆ ಕಾಣದಿದ್ದರೆ ಮಹಾತ್ಮ ಗಾಂಧಿರವರು ತಂದುಕೊಟ್ಟ ಸ್ವಾತಂತ್ರ್ಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನ, ಪ್ರಜಾಪ್ರಭುತ್ವ ಕಳೆದು ಹೋಗುತ್ತದೆ. ಜನರು ದಂಗೆ ಏಳುವ ದಿನಗಳು ದೂರ ಉಳಿದಿಲ್ಲ ಎಂದು ಎಚ್ಚರಿಸಿದರು.ಕಾಂಗ್ರೆಸ್ ಪಕ್ಷದವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿರವರ ನಾಯಕತ್ವದಲ್ಲಿ ಮತಗಳನ್ನು ಕಳ್ಳತನ ಮಾಡಿದ್ದಾರೆಂದು ಲೋಕಸಭೆ ಚುನಾವಣೆ ಮುಗಿದ ಎರಡೂವರೆ ವರ್ಷಗಳ ನಂತರ ಪ್ರತಿಭಟನಾ ಸಮಾವೇಶ ಆಯೋಜಿಸಿದ್ದಾರೆ. ಇದರಿಂದ ಏನು ಪ್ರಯೋಜನ ಆಗುವುದಿಲ್ಲ. ಹೀಗಾಗಿ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಮುಖಂಡರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಿನ ಚುನಾವಣೆ ವ್ಯವಸ್ಥೆ ಬದಲಾವಣೆ ಕುರಿತು ಗಂಭೀರವಾಗಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.ಹಣ ಹಂಚುವುದೇ ತತ್ವ ಸಿದ್ಧಾಂತ:ದೇಶಾದ್ಯಂತ ಚುನಾವಣೆ ವ್ಯವಸ್ಥೆಯಲ್ಲಿ ಅಕ್ರಮ, ಮತಗಳ ಮಾರಾಟ, ಹಣ ಹಂಚುವುದೇ ತತ್ವ ಸಿದ್ಧಾಂತ ಎನ್ನುವಂತಾಗಿದೆ. ಹಣ ಬಲವುಳ್ಳವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಹಣ ಇಲ್ಲದವರು ಚುನಾವಣೆಯಲ್ಲಿ ನಿಲ್ಲದ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಪ್ರಜಾಪ್ರಭುತ್ವ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.ಜನರ ಸೇವೆ ಮಾಡಲು ಕೋಟ್ಯಂತರ ಮಂದಿ ಆಸಕ್ತರಾಗಿದ್ದಾರೆ. ಆದರೆ, ಜಾತಿ - ಹಣ ಬಲವಿಲ್ಲದ ಕಾರಣ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿಯೇ ಭ್ರಷ್ಟರು, ದರೋಡೆಕೋರರು, ಕೊಲೆ ಪಾತಕರು, ರೌಡಿಗಳು, ಲೂಟಿಕೋರರು ಲೋಕಸಭೆ, ರಾಜ್ಯಸಭೆ, ಶಾಸನ ಸಭೆಗಳಿಗೆ ಬರುತ್ತಿದ್ದಾರೆ ಎಂದು ಟೀಕಿಸಿದರು.ಇಡೀ ಲೋಕಸಭೆ ಚುನಾವಣೆ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಯವರ ಕೈಯಲ್ಲಿದೆ. ಯಾವುದಾದರು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ವಲ್ಪ ಬಹುಮತ ಕಳೆದುಕೊಂಡರೆ ಅವರು ಶಾಸಕರನ್ನು ಸಮಾಧಾನ ಪಡಿಸಲು 100 ಕೋಟಿ ನೀಡಲು ಸಿದ್ಧರಾಗಿರುತ್ತಾರೆ. ಇಲ್ಲದಿದ್ದರೆ ಮುಖ್ಯಮಂತ್ರಿ ಹುದ್ದೆ ಕೈತಪ್ಪುವ ಆತಂಕವಿದೆ. ಇದೆಲ್ಲವನ್ನು ನೋಡಿದರೆ ಚುನಾವಣಾ ವ್ಯವಸ್ಥೆ ಸರಿ ಅನಿಸುತ್ತಿದೆಯೇ ಎಂದು ಪ್ರಶ್ನಿಸಿದರು.6 ವರ್ಷ ಸ್ಪರ್ಧೆಗೆ ನಿರ್ಬಂಧ ಹೇರಿ :ರಾಜಕಾರಣಿಗಳು ಮತದಾರರಿಗೆ ಹಣದ ಆಮಿಷ ನೀಡಿ ಮತ ಹಾಕಿಸಿಕೊಳ್ಳುವುದನ್ನು ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಚುನಾವಣೆಗೆ ನಿಂತವರೆಲ್ಲರು ಹಣ ಖರ್ಚು ಮಾಡುತ್ತಾರೆ. ಆದರೆ, ಮತದಾರರು ಹಣ ಮುಟ್ಟಬಾರದು. ಈ ರೀತಿ ಹಂಚುವ ರಾಜಕಾರಣಿಗಳನ್ನು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ನಿರ್ಬಂಧ ಹೇರಬೇಕು. ಆ ಮೂಲಕ ಚುನಾವಣೆ ಪಾರದರ್ಶಕವಾಗಿ ಹಾಗೂ ಮತದಾರರನ್ನು ವ್ಯಾಪಾರದಿಂದ ಮುಕ್ತಿ ಮಾಡಬೇಕು ಎಂದು ಒತ್ತಾಯಿಸಿದರು.