1,500 ಕಿ.ಮೀ. ದೂರದ ಅಯೋಧ್ಯೆಗೆ ಜಿಲ್ಲೆಯ ವಿನೋದ್ ರೆಡ್ಡಿ ಪ್ರಯಾಣ, ಪೂರ್ವ ತಯಾರಿ ಇಲ್ಲದೆ ಕಳೆದ ಡಿ.13ರಿಂದ ಪಾದಯಾತ್ರೆ ಆರಂಭ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರು
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬರುವ 2024 ಜ.22ರಂದು ನಡೆಯಲಿರುವ ರಾಮಮಂದಿರದ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಕೋಟಿ ಕೋಟಿ ಭಕ್ತರು ಅಯೋಧ್ಯೆಗೆ ತೆರಳಲು ಸನ್ನದ್ಧರಾಗಿರುವ ಸಮಯದಲ್ಲಿ ರಾಯಚೂರಿನ ಶ್ರೀರಾಮಭಕ್ತ ಕಾಲ್ನಡಿಗೆಯಲ್ಲಿಯೇ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾನೆ.
ಹೌದು, ನಗರದ ಮಡ್ಡಿಪೇಟೆ ಬಡಾವಣೆ ಯುವಕ ವಿನೋದ್ ರೆಡ್ಡಿ ರಾಯಚೂರಿನಿಂದ ಅಯೋಧ್ಯೆಗೆ ಒಬ್ಬಂಟಿಯಾಗಿ ಪಾದಯಾತ್ರೆ ಕೈಗೊಂಡಿದ್ದು, ಶ್ರೀರಾಮನ ಮೇಲಿನ ಅಪಾರ ಭಕ್ತಿಗೆ ಸಾಕ್ಷಿಯಾಗಿದೆ. 8ನೇ ತರಗತಿ ಓದಿರುವ ವಿನೋದ್ ರೆಡ್ಡಿ ಕುಟುಂಬದಲ್ಲಿ ಅಮ್ಮ, ಅಣ್ಣ-ತಮ್ಮ ಇದ್ದು, ಎರಡು ಎಮ್ಮೆಗಳನ್ನು ಸಾಕಿ ಹಾಲು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಸಣ್ಣ ವಯಸ್ಸಿನಿಂದಲೆಯೇ ಹಿಂದೂ ಧರ್ಮ, ಅಧ್ಯಾತ್ಮದತ್ತ ಹೊರಳಿದ್ದು, ಶ್ರೀರಾಮನ ಪರಮ ಭಕ್ತರಾಗಿದ್ದಾರೆ. ವಿನೋದ್ ರೆಡ್ಡಿ ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಜೀವನ ಸಾರ್ಥಕತೆ ಕ್ಷಣ ಎನ್ನುವ ಮನೋಭಾವನೆ ಹೊಂದಿದ್ದಾರೆ .
ಏಕಾಂಗಿ ಸಂಕಲ್ಪ:
ದೇಶದ ಹಿಂದೂಗಳ ಬಹುದಿನಗಳ ಕನಸಾಗಿರುವ ಶ್ರೀರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ವಿನೋದ್ ರೆಡ್ಡಿ ಏಕಾಂಗಿಯಾಗಿ ಸಂಕಲ್ಪ ಮಾಡಿದ್ದು, ಬರೋಬ್ಬರಿ 1,500 ಕಿ.ಮೀ. ಪಾದಯಾತ್ರೆಯನ್ನು ಕಳೆದ ಡಿ.13ರಿಂದ ಆರಂಭಿಸಿ, ಈಗ ಸುಮಾರು 400 ಕಿ.ಮೀ. ಪ್ರಯಾಣಿಸಿದ್ದು, ತೆಲಂಗಾಣದ ಕಾಮರೆಡ್ಡಿ ಜಿಲ್ಲೆ ಬಿಟ್ಟು ಪಾದಯಾತ್ರೆ ಮುಂದುವರಿಸಿದ್ದಾರೆ. ನಿತ್ಯ 40 ರಿಂದ 50 ಕಿ.ಮೀ. ದೂರ ಕ್ರಮಿಸಿ 40 ದಿನಗಳಲ್ಲಿ ಅಯೋಧ್ಯೆ ಸೇರಬೇಕು ಎನ್ನುವ ಸಂಕಲ್ಪದಡಿ ಕಾಲ್ನಡಿಗೆಯ ಕಾರ್ಯ ಮುಂದುವರಿಸಿದ್ದಾರೆ. ಬೆಳಗಿನ ಜಾವ ಪಾದಯಾತ್ರೆ ಆರಂಭಿಸಿ ದಾರಿಯಲ್ಲಿ ಕಂಡ ಜನರ ಬಳಿ ನೀರು, ಊಟ ಇತರೆ ಸೇವೆಗಳನ್ನು ಪಡೆದು ರಾತ್ರಿ ವೇಳೆಗೆ ಜನವಸತಿ ಇರುವ ಸ್ಥಳ ಸೇರಿ ಅಲ್ಲಿನ ದೇವಸ್ಥಾನ, ಮಂದಿರ-ಮಠಗಳಲ್ಲಿ ವಾಸ್ತವ್ಯ ಹೂಡಿ ಮರು ದಿನ ಬೆಳಗ್ಗೆ ಮತ್ತೆ ನಡಿಗೆ ಆರಂಭಿಸುತ್ತಿದ್ದಾರೆ.
ಕಳೆದ 2 ವಾರಗಳಿಂದ ಪಾದಯಾತ್ರೆ ನಡೆಸುತ್ತಿರುವ ವಿನೋದ್ ರೆಡ್ಡಿಗೆ ಮಾರ್ಗದಲ್ಲಿ ಶ್ರೀರಾಮನ ಭಕ್ತರು ಸೇರಿದಂತೆ ಅನೇಕರು ಭಕ್ತಿ ಭಾವದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಕೆಲವೆಡೆ ಜನರು ಪಾದಗಳಿಗೆ ಕ್ಷೀರಾಭಿಷೇಕ ಮಾಡಿ ಪೂಜಿಸಿ, ಸನ್ಮಾನಿಸಿ ಬೀಳ್ಕೊಡುಗೆ ನೀಡುತ್ತಿದ್ದಾರೆ ಎಂದು ವಿನೋದ್ ರೆಡ್ಡಿ ಕನ್ನಡಪ್ರಭದ ಜೊತೆಗೆ ಪಾದಯಾತ್ರೆಯ ಅನುಭ ಹಂಚಿಕೊಂಡಿದ್ದಾರೆ.
ಪೂರ್ವ ತಯಾರಿ ಇಲ್ಲ, ಶ್ರೀರಾಮನೇ ಎಲ್ಲ: 1,500 ಕಿ.ಮೀ. ದೂರ ಪಾದಯಾತ್ರೆ ಕೈಗೊಂಡಿರುವ ವಿನೋದ್ ರೆಡ್ಡಿ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಕುಟುಂಬಸ್ಥರ ಅನುಮತಿ ಪಡೆದು, ಬ್ಯಾಗ್ ಹಾಕಿಕೊಂಡು, ಆಂಜನೇಯ ಸ್ವಾಮಿಯ ಬಾವುಟ ಹಿಡಿದು ಪಾದಯಾತ್ರೆ ಮಾಡುತ್ತಿದ್ದಾರೆ. ಶ್ರೀರಾಮನೆ ಎಲ್ಲ, ಆತನೇ ಮಾರ್ಗ ತೋರಿಸುತ್ತಾನೆ ಎನ್ನುವ ದೃಢ ಭಕ್ತಿಯೊಂದಿಗೆ ಕಾಲ್ನಡಿಗೆ ಕಾರ್ಯ ಕೈಗೊಂಡಿದ್ದಾನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.