‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವವರನ್ನು ಪೊಲೀಸರು ಬೂಟ್‌ನಿಂದ ಒದೆಯಬೇಕು ಎಂದು ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಹೇಳಿಕೆ ನೀಡಿರುವ ಹಳೆ ವಿಡಿಯೋ ಇದೀಗ ವೈರಲ್ ಆಗಿದೆ
ರಾಯಚೂರು : ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವವರನ್ನು ಪೊಲೀಸರು ಬೂಟ್‌ನಿಂದ ಒದೆಯಬೇಕು ಎಂದು ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಹೇಳಿಕೆ ನೀಡಿರುವ ಹಳೆ ವಿಡಿಯೋ ಇದೀಗ ವೈರಲ್ ಆಗಿದ್ದು, ಇದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದರೆ, ವಿಡಿಯೋ ತಿರುಚಲಾಗಿದೆ ಎಂದು ಕಾಂಗ್ರೆಸ್ ಸಹ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಗರದಲ್ಲಿ ನಡೆಯಿತು. ಈ ನಡುವೆ ಬಷೀರುದ್ದೀನ್‌ರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ.
2023 ಸೆಪ್ಟೆಂಬರ್‌ನಲ್ಲಿ ಸ್ಥಳೀಯ ಕಾಟೆ ದರವಾಜ ಕೋಟೆ ಜಾಗದಲ್ಲಿರುವ ಶರೀಫ್ ಹಜರತ್ ಸೈಯದ್ ಷಾ ಅಲ್ಲಾವುದ್ದೀನ್ ಖಾದ್ರಿ ದರ್ಗಾ ಬಳಿ ಕಮಾನು ನಿರ್ಮಿಸಲಾಗುತ್ತಿರುವ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ನಗರಸಭೆಯಲ್ಲಿ ಪೌರಾಯುಕ್ತರೊಂದಿಗೆ ಮುಸ್ಲಿಂ ಮುಖಂಡರ ಸಭೆ ನಡೆಸಿದಾಗ ಬಷಿರುದ್ದೀನ್ ಅವರು ವಿವಾದಿತ ಸ್ಥಳದಲ್ಲಿ ಬಂದು ಜೈ ಶ್ರೀರಾಮ ಎನ್ನುವವರನ್ನು ಪೊಲೀಸರು ಬೂಟು ಕಾಲಿನಿಂದ ಒದೆಯಬೇಕು ಎಂದು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಜೆಪಿಯಿಂದ ಪ್ರತಿಭಟನೆ, ಆಕ್ರೋಶ: ವಿಡಿಯೋ ವೈರಲ್‌ಗೊಳ್ಳುತ್ತಿದ್ದಂತೆ ಆಕ್ರೋಶಗೊಂಡ ಬಿಜೆಪಿ ಮುಖಂಡರು, ಕಾರ್ಯಕರ್ತರ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಚಪ್ಪಲಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.