ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ

KannadaprabhaNewsNetwork |  
Published : Nov 08, 2025, 04:00 AM IST
Lokayukta | Kannada Prabha

ಸಾರಾಂಶ

ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳ(ಆರ್‌ಟಿಓ) ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳ(ಆರ್‌ಟಿಓ) ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಯಶವಂತಪುರ, ರಾಜಾಜಿನಗರ, ಕೆ.ಆರ್‌.ಪುರ, ಜಯನಗರ, ಯಲಹಂಕ, ಕಸ್ತೂರಿನಗರ ಆರ್‌ಟಿಓ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ಅವರು ಖುದ್ದು ಯಶವಂತಪುರ ಮತ್ತು ರಾಜಾಜಿನಗರ ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಲವು ಲೋಪದೋಷಗಳು ಕಂಡು ಬಂದಿವೆ. ಆರ್‌ಟಿಒ ಕಚೇರಿ ಆವರಣದಲ್ಲಿ 32 ಸ್ಟೇಷನರಿ ಹಾಗೂ ಜೆರಾಕ್ಸ್‌ ಅಂಗಡಿಗಳಿದ್ದು, ಲೋಕಾಯುಕ್ತ ಅಧಿಕಾರಿಗಳು ತಪಾಸಣೆಗೆ ಮುಂದಾದಾಗ ಅಂಗಡಿಗಳನ್ನು ಮುಚ್ಚಲಾಗಿದೆ. ಈ ಸಂಬಂಧ ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಸೂಚಿಸಿದ್ದಾರೆ.

ಏಜೆಂಟ್‌ ಬಳಿ ನಗದು ಪತ್ತೆ:

ಇದೇ ವೇಳೆ ಕೆಲ ನೌಕರರು ಕರ್ತವ್ಯಕ್ಕೆ ಗೈರಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನೆ ಮಾಡಿದಾಗ ಸಮರ್ಪಕ ಉತ್ತರ ನೀಡಿಲ್ಲ. ಕೆಲ ಅಧಿಕಾರಿಗಳು ಕಚೇರಿಯ ನಗದು ವಹಿಯಲ್ಲಿ ಸಹಿ ಮಾಡದಿರುವುದು ಕಂಡು ಬಂದಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ 32 ನೌಕರರ ಪೈಕಿ 7 ಮಂದಿ ಮಾತ್ರ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವುದು ಕಂಡು ಬಂದಿದೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಓಡುತ್ತಿದ್ದ ಇಬ್ಬರು ಏಜೆಂಟ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ 14 ಸಾವಿರ ರು. ನಗದು ಪತ್ತೆಯಾಗಿದೆ. ವಿಚಾರಣೆ ಮಾಡಿದಾಗ ಸಮರ್ಪಕ ಉತ್ತರ ನೀಡಿಲ್ಲ.

ನೌಕರರಿಂದ ನಿಯಮ ಉಲ್ಲಂಘನೆ:

ಉಪಲೋಕಾಯುಕ್ತ ಕೆ.ಎನ್‌. ಫಣೀಂದ್ರ ಅವರು ಜಯನಗರ ಹಾಗೂ ಯಲಹಂಕ ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವು ಲೋಷದೋಷಗಳು ಕಂಡು ಬಂದಿವೆ. ಉಪಲೋಕಾಯುಕ್ತ ಬಿ.ವೀರಪ್ಪ ಅವರು ಕಸ್ತೂರಿನಗರ ಮತ್ತು ಕೆ.ಆರ್‌.ಪುರ ಆರ್‌ಟಿಒ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಆರ್‌ಸಿ, ಡಿಎಲ್‌, ಎಲ್‌ಎಲ್‌ಆರ್‌ ಅರ್ಜಿ ಬಾಕಿ, ಕೆಲ ಅಧಿಕಾರಿಗಳು ಸಮವಸ್ತ್ರ, ಐಡಿ ಕಾರ್ಡ್‌ ಧರಿಸದಿರುವುದು ಸೇರಿದಂತೆ ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ. ಅಂತೆಯೆ ಕೆಲವು ಸಾರ್ವಜನಿಕರು ಆರ್‌ಟಿಓ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಆರೋಪ ಸಹ ಮಾಡಿದ್ದಾರೆ.ಫೋನ್‌ ಪೇ, ಗೂಗಲ್‌ ಪೇ ಡಿಲೀಟ್‌!:

ಲೋಕಾಯುಕ್ತ ದಾಳಿ ವೇಳೆ ಕೆ.ಆರ್‌.ಪುರ ಆರ್‌ಟಿಒ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ನೌಕರರ ಮೊಬೈಲ್‌ ಫೋನ್‌ ತಪಾಸಣೆ ಮಾಡಿದಾಗ ಆಗ ತಾನೇ ಫೋನ್‌ ಪೇ ಮತ್ತು ಗೂಗಲ್‌ ಪೇ ಆ್ಯಪ್‌ಗಳನ್ನು ಡಿಲೀಟ್‌ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವೇತನ ಮತ್ತು ಯುಪಿಐ ವಹಿವಾಟು, ಒಂದು ವರ್ಷದ ಬ್ಯಾಂಕ್‌ ಖಾತೆಗಳ ವಹಿವಾಟು ಮತ್ತು ಆಸ್ತಿ ಮತ್ತು ದಾಯಿತ್ವ ಪಟ್ಟಿಯೊಂದಿಗೆ ವಹಿವಾಟುಗಳನ್ನು ಸಮಗ್ರ ವರದಿ ದಾಖಲಾತಿಗಳೊಂದಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.ಅಂಗಡಿಯಲ್ಲಿ ಆರ್‌ಸಿ, ಡಿಎಲ್‌ಗಳು ಪತ್ತೆ!:

ಕಸ್ತೂರಿನಗರ ಆರ್‌ಟಿಒ ಕಚೇರಿ ಎದುರಿನ ಮಾರುತಿ ಮೋಟಾರ್ಸ್‌ ಪ್ರೈವೆಟ್‌ ಲಿಮಿಟೆಡ್‌ ಎಂಬ ಅಂಗಡಿ ಪರಿಶೀಲನೆ ವೇಳೆ 49 ಆರ್‌ಸಿ ಹಾಗೂ 83 ಡಿಎಲ್‌ ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ಈ ಡಿಎಲ್‌ ಹಾಗೂ ಆರ್‌ಸಿಗಳ ಮೇಲೆ 1,500 ರು., 2 ಸಾವಿರ ರು., 3,500 ರು. ಹಾಗೂ 5 ಸಾವಿರ ರು. ಎಂದು ನಮೂದಿಸಿರುವುದು ಕಂಡು ಬಂದಿದೆ. ಕೆಲವೊಂದರ ಮೇಲೆ ರೈಟ್‌ ಮಾರ್ಕ್‌ ಹಾಕಿರುವುದು ಪತ್ತೆಯಾಗಿದೆ. ಈ ಅಂಗಡಿ ರಜನಿಕಾಂತ್‌ ಎಂಬಾತನಿಗೆ ಸೇರಿದೆ. ಸಾರ್ವಜನಿಕ ದಾಖಲೆಗಳು ಖಾಸಗಿ ವ್ಯಕ್ತಿಯ ವಶದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮಾಹಿತಿ ಸೋರಿಕೆ?:ಲೋಕಾಯುಕ್ತ ಅಧಿಕಾರಿಗಳು ಆರ್‌ಟಿಒ ಕಚೇರಿಗಳ ಮೇಲೆ ದಾಳಿ ನಡೆಸುವ ಮಾಹಿತಿ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ, ಆರು ಆರ್‌ಟಿಒ ಕಚೇರಿಗಳ ಸುತ್ತಮುತ್ತ ನೂರಕ್ಕೂ ಹೆಚ್ಚು ಅಂಗಡಿಗಳು ಇದ್ದು, ಲೋಕಾಯುಕ್ತ ದಾಳಿ ವೇಳೆ ಈ ಅಂಗಡಿಗಳ ಬಾಗಿಲು ಹಾಕಿರುವುದು ಕಂಡು ಬಂದಿದೆ. ಅಂದರೆ, ದಾಳಿ ಬಗ್ಗೆ ಮಾಹಿತಿ ಸೋರಿಕೆಯಾದ್ದರಿಂದ ಬಹುತೇಕ ಅಂಗಡಿಗಳಿಗೆ ಬೀಗ ಹಾಕಲಾಗಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಈ ಅಂಗಡಿಗಳಿಗೆ ಒಮ್ಮೆಗೆ ಏಕೆ ಬೀಗ ಹಾಕಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ