ಕನ್ನಡಪ್ರಭ ವಾರ್ತೆ ಬೀಳಗಿ
ಅಪರಾಧ ಪ್ರಕರಣಗಳ ತನಿಖೆ ಮತ್ತು ಅದರಲ್ಲಿ ಒಳಗೊಂಡಿರುವ ಪ್ರತಿ ತಜ್ಞರ ಪಾತ್ರ ಎಷ್ಟರ ಮಟ್ಟಿಗೆ ಇದೆ ಎಂಬ ಜ್ಞಾನವನ್ನು ಮತ್ತು ಶಿಸ್ತು ಹೆಚ್ಚಿಸುವಲ್ಲಿ ಮೆಡಿಕೊ ಲಿಗಲ್ ಸೊಸೈಟಿ ಬಹಳ ಮುಖ್ಯವಾದ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ (ಜಡ್ಜ) ರವಿ ಹೊಸಮನಿ ತಿಳಿಸಿದರು.ತಾಲೂಕಿನ ಬಾಡಗಂಡಿ ಗ್ರಾಮದಲ್ಲಿನ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ಮೆಡಿಕೊ ಲೀಗಲ್ ಸೊಸೈಟಿಯ ೩೩ನೇ ವರ್ಷದ ವಾರ್ಷಿಕ ಸಮ್ಮೇಳನ ಕೆಎಎಂಎಲಎಸ್ ಕಾನ್-೨೦೨೫ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು,
ವೈದ್ಯಕೀಯ ವ್ರತ್ತಿ, ಕ್ರಿಮಿನಲ್ ಕಾನೂನು ವಕೀಲರು, ಪೊಲೀಸ್, ನ್ಯಾಯಾಧೀಶರು, ವಿಜ್ಞಾನಿಗಳು, ಪ್ರಾಸಿಕ್ಯೂಷನ್ ಕ್ಷೇತ್ರದ ಸದಸ್ಯರನ್ನು ಹೊಂದಿರುವ ಸೊಸೈಟಿ ಹಲವು ಬಗೆಯ ಪ್ರಕರಣಗಳ ಕುರಿತಾಗಿ ಸಮರ್ಪಕವಾಗಿ ಮಂಡಿಸುವ ಮೂಲಕ ನಿಜವಾದ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುತ್ತಿದ್ದು, ರಾಜ್ಯಮಟ್ಟದ ಸಮ್ಮೇಳನವನ್ನು ಜಿಲ್ಲಾ ಕೇಂದ್ರಗಳಲ್ಲಿ ಮಾಡುವುದು ಪದ್ಧತಿಯಿತ್ತು. ಆದರೆ ಬೀಳಗಿ ತಾಲೂಕಿನ ಬಾಡಗಂಡಿ ಎಂಬ ಪುಟ್ಟಹಳ್ಳಿಯಲ್ಲಿ ಸ್ಥಾಪನೆಯಾಗಿರುವ ಈ ಸುಸಜ್ಜಿತ ಮೆಡಿಕಲ್ ಕಾಲೇಜು ಆವರಣದಲ್ಲಿ ೩೩ನೇ ಸಮ್ಮೇಳನ ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಸಂಸ್ಥಾಪಕರು, ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ರಾಜ್ಯ, ಜಿಲ್ಲಾ ಕೇಂದ್ರದಲ್ಲಿ ನೆಡೆಯಬೇಕಿದ್ದ ಈ ಸಮ್ಮೇಳನ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ನೆಡೆಯುತ್ತಿರುವುದು ಈ ಭಾಗದ ಹೆಮ್ಮೆ. ಸೊಸೈಟಿಯ ಅಧ್ಯಕ್ಷ ಡಾ.ಧರ್ಮರಾಯ ಇಂಗಳೆ ಅವರು ನಮ್ಮ ಕಾಲೇಜಿನ ಡೀನ್ ಆಗಿದ್ದು, ಈ ಮೆಡಿಕಲ್ ಕಾಲೇಜು ಕೇವಲ ಒಂದೇ ವರ್ಷದಲ್ಲಿ ಇಷ್ಟೊಂದು ಹೆಸರು ಸಂಪಾದಿಸಲು ಕಾರಣವಾಗಿದೆ. ತಂಡದ ನಿರಂತರ ಶ್ರಮದ ಮೂಲಕ ಮೆಡಿಕಲ್ ಕಾಲೇಜು ಬೆಳೆಯುತ್ತಿದೆ. ನ್ಯಾಯಮೂರ್ತಿ ಹೊಸಮನಿ ಅವರು ಗ್ರಾಮೀಣ ಭಾಗದಲ್ಲೂ ಇಂತಹ ಕೆಲಸಗಳು ಆಗಬೇಕು ಎಂದಿದ್ದಾರೆ. ಈ ಭಾಗದಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡುತ್ತೇನೆ ಎಂದಾಗ ಸಾಕಷ್ಟು ಹಿರಿಯರು ನಿಮಗೆ ತಲೆ ಸರಿ ಇಲ್ಲ. ಗ್ರಾಮೀಣ ಭಾಗದಲ್ಲಿ ಇಂತಹ ಕೆಲಸ ಆಗುವುದಿಲ್ಲ ಎಂದಿದ್ದರು. ಆದರೆ ಇಂದು ಮೆಡಿಕಲ್ ಕಾಲೇಜು ರಾಜ್ಯದಲ್ಲಿ ಉತ್ತಮ ಹೆಸರು ಪಡೆದಿದೆ.ಮೆಡಿಕಲ್ ಹಂತದ ತೊಂದರೆ ಹಾಗೂ ಪ್ರಕರಣಗಳು ಕುರಿತಾಗಿ ಅರಿಯಲು ಎಲ್ಲಾ ವಿಭಾಗಗಳಲ್ಲಿ ಇಂಗ್ಲಿಷ್ ಪುಸ್ತಕ ಸಿಗುತ್ತಿದ್ದು, ಅವೆಲ್ಲವನ್ನೂ ಕ್ರೋಡೀಕರಿಸಿ ಕನ್ನಡಕ್ಕೆ ಅನುವಾದ ಮಾಡಿ ವಿಧಿ ವೈದ್ಯಕೀಯ ಶಾಸ್ತ್ರ ಹಾಗೂ ವಿಷಶಾಸ್ತ್ರ ಎಂಬ ಪುಸ್ತಕವನ್ನು ಡಾ.ಧರ್ಮರಾಯ ಇಂಗಳೆ ಅವರು ರಚಿಸಿದ್ದು, ಅದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮೆಡಿಕೊ ಲೀಗಲ್ ಸೊಸೈಟಿಯ ವತಿಯಿಂದ ಎಂಬಿಬಿಎಸ್, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಚಿನ್ನದ, ಬೆಳ್ಳಿ ಹಾಗೂ ಕಂಚಿನ ಪದಕ ವಿತರಿಸಲಾಯಿತು.ಸಮಾರಂಭದಲ್ಲಿ ಕರ್ನಾಟಕ ಮೆಡಿಕೊ ಲೀಗಲ್ ಸೊಸೈಟಿಯ ಅಧ್ಯಕ್ಷ ಡಾ.ಧರ್ಮರಾಯ ಇಂಗಳೆ, ಕಾರ್ಯದರ್ಶಿ ಡಾ.ಸೋಮಶೇಖರ್ ಪೂಜಾರ, ಡಾ.ಎಂ.ಎ. ಬಗಲಿ, ಡಾ.ವಿಜಯಕುಮಾರ ಹಳ್ಳಿ, ಡಾ.ರಾಘವೇಂದ್ರ, ಕಾಲೇಜು ಉಪಾಧ್ಯಕ್ಷ ಅನುಷಾ ನಾಡಗೌಡ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ರಾಜ್ಯಗಳಿಂದ ಆಗಮಿಸಿದ್ದ ವೈದ್ಯರು,ಪರಿಣತರು ಪಾಲ್ಗೊಂಡಿದ್ದರು.