ಕನ್ನಡಪ್ರಭ ವಾರ್ತೆ ಪಾಂಡವಪುರ
ಮಧ್ಯಾಹ್ನ 2 ಗಂಟೆಗೆ ವಿಶೇಷ ರೈಲಿನಲ್ಲಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಆಗಮಿಸಿ ರೈಲಿನಿಂದ ಕೆಳಗಿಳಿದಾಗ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಅವರಿಗೆ ಹೂ ಹಾರ ಹಾಕಿ ಜೈಕಾರ ಹಾಕಿದರು. ಸಾರ್ವಜನಿಕರು ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಕರ್ಯ ಹಾಗೂ ಕೆಲವು ರೈಲುಗಾಡಿಗಳ ನಿಲುಗಡೆಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಎಸ್ಕಲೇಟರ್ ಅಳವಡಿಕೆ, ಹೈಟೆಕ್ ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಮನವಿ ಮಾಡಿಕೊಂಡರು.ಪಾಂಡವಪುರದಿಂದ ಬೆಂಗಳೂರಿಗೆ ಪ್ರಯಾಣಿಸಲು ಬೆ.9.30ರಿಂದ 1.30ರವರೆಗೆ ಯಾವುದೇ ರೈಲುಗಾಡಿಗಳು ಇಲ್ಲ. ಈ ಮಧ್ಯೆದಲ್ಲಿ 11.45ಕ್ಕೆ ಮೈಸೂರಿನಿಂದ ಬರುವ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಿಕೊಡಬೇಕು ಎಂದು ಕೋರಿದರು.
ಪಾಂಡವಪುರ ರೈಲ್ವೆ ನಿಲ್ದಾಣದಿಂದ ಪಾಂಡವಪುರ ತಾಲೂಕು ಹಾಗೂ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲ, ಚನ್ನರಾಯಪಟ್ಟಣ ತಾಲೂಕಿನ ಜನತೆಗೆ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರ ಆರತಿ ಉಕ್ಕಡದ ಅಹಲ್ಯಾ ದೇವಸ್ಥಾನಕ್ಕೆ ಬರುವ ಜನರಿಗೆ ರೈಲು ಗಾಡಿಗಳ ನಿಲುಗಡೆಯಿಂದಾಗಿ ಬಹಳ ಅನುಕೂಲವಾಗಲಿದೆ. ಜತೆಗೆ ರೈಲ್ವೆ ಇಲಾಖೆಗೂ ಹೆಚ್ಚಿನ ಆದಾಯವಾಗಲಿದೆ ಎಂದು ಕೋರಿದರು.
ಸಚಿವರಿಗೆ ಹಾರ-ತುರಾಯಿ ಹಾಗೂ ಜೈಕಾರ ಘೋಷಣೆ ಹಾಕಲು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದರು. ಇದರಿಂದಾಗಿ ನೂಕುನುಗ್ಗಲು ಉಂಟಾಯಿತು. ಸಚಿವರಿಗೆ ಅಹವಾಲು ನೀಡಲು ಬಂದಿದ್ದ ಹಲವು ಸಾರ್ವಜನಿಕರಿಗೆ ಮನವಿ ಸಲ್ಲಿಸಲು ಸಾಧ್ಯವಾಗದೆ ಹಿಂದಿರುಗಿದರು. ಸಚಿವರಿಗೆ ಸ್ಥಳೀಯರು ಹಾಗೂ ಲಾರಿ ಮಾಲೀಕರ ಸಂಘದವರು ಅಭಿನಂದನೆ ಸಲ್ಲಿಸಿ ಹಲವು ಮನವಿ ನೀಡಿದರು. ಮನವಿ ಸ್ವೀಕರಿಸಿದ ಸಚಿವರು ಅಲ್ಲಿಂದ ಶ್ರೀರಂಗಪಟ್ಟಣ ತಾಲೂಕಿನ ಕಡೆಗೆ ತೆರಳಿದರು.
ದೊಡ್ಡಬ್ಯಾಡರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರಿಂದ ಮನವಿ ಸಲ್ಲಿಕೆ
ತಾಲೂಕಿನ ದೊಡ್ಡಬ್ಯಾಡರಹಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಅವರಿಗೆ ದೊಡ್ಡಬ್ಯಾಡರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಿರುಪತಿ ಎಕ್ಸ್‌ಪ್ರೆಸ್ ಹಾಗೂ ತಾಳಗೊಪ್ಪ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡುವಂತೆ ಮನವಿ ಮಾಡಿದರು.