ಕನ್ನಡಪ್ರಭ ವಾರ್ತೆ ಬೆಂಗಳೂರು ರೈಲುಗಳಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಕಳ್ಳತನ ಸೇರಿದಂತೆ ಅಪರಾಧ ಕೃತ್ಯಗಳ ತಡೆಗೆ ಮುಂದಾಗಿರುವ ರಾಜ್ಯ ರೈಲ್ವೆ ಪೊಲೀಸರು, ಈಗ ರಾಜ್ಯದಲ್ಲಿ ಸಂಚರಿಸುವ ರೈಲುಗಳಲ್ಲಿ ‘ರಾತ್ರಿ ಗಸ್ತು’ ಮೂಲಕ ಕಣ್ಗಾವಲಿರಿಸಿದ್ದಾರೆ.ರೈಲು ಪಹರೆ ಪರಿಣಾಮ ಹೊಸ ವರ್ಷಾಚರಣೆಗೆ ನಾಡಿಗೆ ಭದ್ರತಾ ಪಡೆಗಳ ಕಣ್ತಪ್ಪಿಸಿ ಬರುತ್ತಿದ್ದ 60 ಲಕ್ಷ ರು. ಮೌಲ್ಯದ ಡ್ರಗ್ಸ್ ಅನ್ನು ರೈಲ್ವೆ ಪೊಲೀಸರು ಪತ್ತೆಹಚ್ಚಿದ್ದು, ಏಳು ಮಂದಿ ಪೆಡ್ಲರ್‌ಗಳನ್ನು ಜೈಲಿಗೆ ಸಹ ಅಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗಸ್ತಿನ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ರೈಲ್ವೆ ಡಿಐಜಿ ಡಾ.ಎಸ್.ಡಿ.ಶರಣಪ್ಪ ಸೂಚಿಸಿದ್ದಾರೆ.ಎಲ್ಲಿಂದ ಗಾಂಜಾ ಪೂರೈಕೆ:ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಸೇರಿದಂತೆ ರಾಜ್ಯಕ್ಕೆ ಹೊರ ರಾಜ್ಯಗಳಿಂದಲೇ ಅತಿ ಹೆಚ್ಚು ಗಾಂಜಾ ಪೂರೈಕೆಯಾಗುತ್ತಿದೆ. ಅದರಲ್ಲೂ ಒಡಿಶಾ, ಆಂಧ್ರಪ್ರದೇಶ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಮೂಲಕ ಕ್ವಿಂಟಲ್‌ಗಟ್ಟಲೆ ಗಾಂಜಾ ಕಳ್ಳ ಸಾಗಾಣಿಕೆಯಾಗುತ್ತಿದೆ. ಕಡಿಮೆ ವೆಚ್ಚ ಹಾಗೂ ಸುಲಭ ಎಂಬ ಕಾರಣದಿಂದ ಹೊರರಾಜ್ಯಗಳಿಂದ ಗಾಂಜಾ ಪೂರೈಕೆಗೆ ರೈಲುಗಳನ್ನೇ ಅಧಿಕವಾಗಿ ಮಾದಕ ವಸ್ತು ಮಾರಾಟಗಾರರು ಬಳಸುತ್ತಿದ್ದಾರೆ. ಹೆಚ್ಚು ಪ್ರಯಾಣಿಕರಿರುವ ರೈಲುಗಳಲ್ಲಿ ತಪಾಸಣೆ ಕಡಿಮೆ ಇರುತ್ತದೆ. ಕಾರು ಅಥವಾ ಬಸ್ಸುಗಳ ಮೂಲಕ ಸಾಗಿಸಿದರೆ ಪೊಲೀಸರ ತಪಾಸಣೆ ಇರುತ್ತದೆ. ಹಾಗಾಗಿ ರೈಲುಗಳನ್ನೇ ಪೆಡ್ಲರ್‌ಗಳು ಆಶ್ರಯಿಸಿದ್ದಾರೆ. ಅಲ್ಲದೇ ಮಾದಕ ವಸ್ತು ಪ್ರಕರಣಗಳಲ್ಲಿ ಬಂಧಿತ ಗಾಂಜಾ ಪೆಡ್ಲರ್‌ಗಳ ವಿಚಾರಣೆ ವೇಳೆ ರೈಲುಗಳ ಮೂಲಕ ಗಾಂಜಾ ಸಾಗಿಸಿರುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಮಾದಕ ವಸ್ತು ಸಾಗಾಣಿಕೆಗೆ ರೈಲ್ವೆ ಪೊಲೀಸರ ಗಸ್ತು ವ್ಯವಸ್ಥೆ ಜಾರಿಗೆ ತರಲಾಗಿದೆ.ಹೇಗೆ ರೈಲ್ವೆ ಪೊಲೀಸರ ಗಸ್ತು:
ಕರ್ನಾಟಕಕ್ಕೆ ಹೊರರಾಜ್ಯಗಳಿಂದ ಅಧಿಕ ಪ್ರಮಾಣದಲ್ಲಿ ಗಾಂಜಾ ಸಾಗಿಸುವ ರೈಲುಗಳನ್ನು ಗುರುತಿಸಲಾಗಿದೆ. ಆ ರೈಲುಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಡಿಐಜಿ ಮಾಹಿತಿ ನೀಡಿದರು.