ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಲೀಗೌಡನಹಳ್ಳಿ ಗ್ರಾಮದ ಯುವ ರೈತ ಮಣಿಕಂಠ (24) ಕಳೆದ ಸೆ.18 ರಂದು ತಮ್ಮ ಜಮೀನಿನಲ್ಲಿ ಬೆಳೆಗೆ ಸಿಂಪಡಿಸಲು ತಂದಿಟ್ಟಿದ್ದ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.
ಮೃತ ಮಣಿಕಂಠನ ತಂದೆ ಶಿವಣ್ಣ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಸಾವಿಗೆ ಸಾಲ, ಫಸಲು ಒಣಗಿದ್ದು, ೨ ಬೊರ್ ಕೊರೆಸಿ ನೀರು ಬರದೆ ಇದ್ದುದ್ದು, 16 ಲಕ್ಷ ರು. ಸಾಲದ ಕಾರಣ ಖಿನ್ನತೆಗೆ ಒಳಗಾಗಿದ್ದ ಮಣಿಕಂಡ ವಿಷ ಸೇವಿಸಿ ಇಹಲೋಕ ತ್ಯಜಿಸಿದ್ದಾರೆ.ಮೃತ ರೈತ ಮಣಿಕಂಠನಿಗೆ ಕೃಷಿಯಲ್ಲಿ ಆಸಕ್ತಿ ಇತ್ತು. ಈ ಕಾರಣದಿಂದಲೇ ಆಲೂಗಡ್ಡೆ, ಅರಿಶಿನ, ಬೆಳ್ಳುಳ್ಳಿ ಬಿತ್ತನೆ ಮಾಡಿದ್ದ. ಅಂತರ್ಜಲ ಕುಸಿತದಿಂದ ಬೊರ್‌ನಲ್ಲಿ ನೀರು ಕಡಿಮೆಯಾಗುತ್ತಿತ್ತು.ಇದನ್ನು ಕಂಠ ಮೃತ ಮಣಿಕಂಠ, ‘ನನ್ನ ಕಣ್ಣಿಂದ ಒಣಗಿದ ಫಸಲು ನೋಡಲಾಗುವುದಿಲ್ಲ, ಸಾಯಬೇಕು’ ಎಂದು ಕುಟುಂಬದವರ ಜತೆ ಹೇಳುತ್ತಿದ್ದ ಎನ್ನಲಾಗಿದೆ.
ಕೃಷಿ ಸಹಾಯಕ ಇಲಾಖೆ ನೌಕರ ಮೂರ್ತಿ ಸ್ಥಳಕ್ಕಾಗಮಿಸಿ,ರಾಜ್ಯ ಸರ್ಕಾರದಿಂದ ದೊರೆಯುವ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತನ ಅಂತ್ಯಕ್ರಿಯೆ ನೆರವೇರಿತು.
ಸೆ.18ರ ಬೆಳಿಗ್ಗೆ 10.30 ರ ಸಮಯದಲ್ಲಿ ಮೃತನ ತಾಯಿ ನಾಗಮ್ಮ ಜಮೀನಿನಲ್ಲಿ ಕಳೆ ಕೀಳುತ್ತಿದ್ದರು. ಆ ಸಮಯದಲ್ಲಿ ಮಣಿಕಂಠ ಜಮೀನಿನಲ್ಲಿದ್ದ ಕ್ರೀಮಿನಾಶ ಸೇವಿಸಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದುದನ್ನು ಮೃತನ ತಾಯಿ ನಾಗಮ್ಮ ಕಂಡಿದ್ದಾರೆ.
ವೈದ್ಯರ ಸಲಹೆಯಂತೆ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಮಣಿಕಂಠ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.