ಮಳೆ, ಗಾಳಿಗೆ ರಾಮಗಿರಿಯಲ್ಲಿ ಬಾಳೆತೋಟದ ಫಸಲು ನಾಶ

KannadaprabhaNewsNetwork | Published : May 19, 2024 1:46 AM

ಸಾರಾಂಶ

ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಸುರಿದ ವರ್ಷಧಾರೆಗೆ ಜಿಲ್ಲೆಯಾದ್ಯಂತ ಭಾಗಶಃ 8 ಮನೆಗಳಿಗೆ ಹಾನಿಯಾಗಿದ್ದು, ಫಸಲಿಗೆ ಬಂದಿದ್ದ ಬಾಳೆತೋಟ ನಾಶವಾಗಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಶುಕ್ರವಾರ ರಾತ್ರಿ ಸುರಿದ ಮಳೆಗೆ ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಫಸಲಿಗೆ ಬಂದಿದ್ದ ಬಾಳೆತೋಟ ನಾಶವಾಗಿದೆ. ಬೀಸಿದ ಬಿರುಗಾಳಿಗೆ ರಾಮಗಿರಿ ಗೊಲ್ಲರಹಟ್ಟಿಯ ರಮೇಶ್ ಎಂಬುವಾತನ ಒಂದು ಎಕರೆಯಲ್ಲಿ ಬೆಳೆದು ನಿಂತಿದ್ದ ಬಾಳೆ ನೆಲಕಚ್ಚಿದೆ. ಸುಮಾರು 8 ಲಕ್ಷ ರು ನಷ್ಟು ನಷ್ವವಾಗಿದೆ. ಸಂತೋಷ್ ಎಂಬ ರೈತನ ಒಂದುವರೆ ಎಕರೆ ಬಾಳೆನಾಶವಾಗಿದೆ.

ಬಾಳೆ ಬೆಳೆ ಫಸಲಿಗೆ ಬರುವಾಗ ಕೊಳವೆ ಬಾವಿ ಬತ್ತಿದ್ದರಿಂದ ತೋಟ ಉಳಿಸಿಕೊಳ್ಳಲು ರೈತ ಸಂತೋಷ್ ಟ್ಯಾಂಕರ್ ಮೂಲಕ ನೀರು ಹಾಯಿಸಿದ್ದ. ಇದೀಗ ಮಳೆಗೆ ಇಡೀ ಫಸಲು ಹಾನಿಯಾಗಿದ್ದು, ಮುಂದೇನು ಮಾಡಬೇಕು ಎಂದು ತೋಚದೆ ಕಂಗೆಟ್ಟಿದ್ದಾನೆ. 12 ಲಕ್ಷ ರು. ನಷ್ಟಕ್ಕೆ ಒಳಗಾಗಿದ್ದಾನೆ. ಶನಿವಾರ ಸಂಜೆ ಕೂಡಾ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.ತುರುವನೂರು ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದಿದೆ.ಚಿತ್ರದುರ್ಗದಲ್ಲಿ 42.8 ಮಿ.ಮೀ.ಮಳೆ

ಚಿತ್ರದುರ್ಗ: ಶುಕ್ರವಾರ ಸಂಜೆ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ನಗರದಲ್ಲಿ 42.8 ಮಿಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಹೊಸದುರ್ಗದಲ್ಲಿ 30.4ಮಿ.ಮೀ, ಬಾಗೂರಿನಲ್ಲಿ 5.5 ಮಿಮೀ, ಮಾಡದಕೆರೆಯಲ್ಲಿ 13, ಹೊಳಲ್ಕೆರೆಯಲ್ಲಿ 19.2 ಮಿಮೀ, ರಾಮಗಿರಿಯಲ್ಲಿ 8.4, ಚಿಕ್ಕಜಾಜೂರಿನಲ್ಲಿ 41.2 ಮಿಮೀ, ಹೆಚ್.ಡಿ.ಪುರದಲ್ಲಿ 36.2, ತಾಳ್ಯದಲ್ಲಿ 4.2 ಮಿ.ಮೀ.ಮಳೆಯಾಗಿದೆ. ಹಿರಿಯೂರು ತಾಲೂಕಿನ ಇಕ್ಕನೂರಿನಲ್ಲಿ 22.4ಮಿಮೀ, ಈಶ್ವರಗೆರೆಯಲ್ಲಿ 5.8 ಮಿಮೀ ಮಳೆಯಾಗಿದೆ.

ಶುಕ್ರವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಭಾಗಶಃ 8 ಮನೆಗಳಿಗೆ ಹಾನಿಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 1 ಭಾಗಶಃ ಮನೆಹಾನಿಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿವೆ. ಹೊಳಲ್ಕೆರೆ ತಾಲೂಕಿನಲ್ಲಿ ಭಾಗಶಃ 1 ಮನೆ ಹಿರಿಯೂರು ತಾಲೂಕಿನಲ್ಲಿ ಭಾಗಶಃ 4 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Share this article