ಪರಶಿವಮೂರ್ತಿ ದೋಟಿಹಾಳ
ಈ ಜಲಪಾತವು ಜಿಲ್ಲಾ ಕೇಂದ್ರ ಕೊಪ್ಪಳದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದ್ದು, ಹೈದರಾಬಾದ್ ಕರ್ನಾಟಕದಲ್ಲಿರುವ ಏಕೈಕ ಜಲಪಾತ ಎಂಬ ಹೆಗ್ಗಳಿಕೆ ಪಡೆದಿದೆ. ಬೇಸಿಗೆಯ ದಿನದಲ್ಲಿ ಈ ಜಲಪಾತದಲ್ಲಿ ನೀರು ಇರುವುದಿಲ್ಲ. ಆದರೆ ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಜಲಪಾತದಲ್ಲಿ ನೀರು ಧುಮ್ಮುಕ್ಕುತ್ತಿರುವ ದೃಶ್ಯ ಕಾಣಬಹುದಾಗಿದೆ.
ಮಳೆಯಾಶ್ರಿತ ಜಲಪಾತ ಇದಾಗಿದ್ದು, ದೊಡ್ಡ ಮಳೆಯಾಗಿ ಬೆಟ್ಟದಲ್ಲಿ ಸೆಲೆ ಉಂಟಾಗಿ ಚಿಕ್ಕ ಕೆರೆಗಳ ಮೂಲಕ ನೀರು ಸಾಗಿ ಬಂದು ಸುಮಾರು 20 ಅಡಿ ಮೇಲಿನಿಂದ ಕೆಳಕ್ಕೆ ಧುಮ್ಮಿಕ್ಕುತ್ತದೆ. ಈ ಜಲಪಾತಕ್ಕೆ ಹೊಂದಿಕೊಂಡೇ ಶಿವಲಿಂಗವಿದೆ. ಇದನ್ನು ಹಿಂದೆ ಕಪಿಲಮುನಿ ಎಂಬ ತಪಸ್ವಿ ಸ್ಥಾಪಿಸಿದ್ದರು. ಅವರು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರು ಎಂಬ ಪ್ರತೀತಿಯಿದೆ. ಕಪಿಲಮುನಿ ಹೆಸರೇ ಜಲಪಾತಕ್ಕೆ ಬಂದಿದ್ದು ಕಪಿಲತೀರ್ಥ ಎಂದು ಕರೆಯಲಾಗುತ್ತದೆ. ಕೆಲವು ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದರೆ ಇದು ಉತ್ತಮ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ.ನೀರಿನ ಮೂಲ: ಕಪೀಲತೀರ್ಥದ ಗುಡ್ಡವು ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು, ಬದಾಮಿಯಿಂದ ಬೆಳಗಾವಿ ವರೆಗೂ ಇದೆ. ಈ ಗುಡ್ಡಗಳ ಮೇಲೆ ವೆಂಕಟಾಪುರ, ಗಾಣದಾಳ ಎಂಬ ಊರು ಇದೆ. ಅಲ್ಲಲ್ಲಿ ಸಣ್ಣ ಕೆರೆಗಳು ಇವೆ. ಮಳೆಯಾದರೆ ಸಾಕು ಕೆರೆಗಳಿಂದ ನೀರು ಹರಿದು ಬರುವುದು. ಕಪೀಲತೀರ್ಥ ಜಲಪಾತದಲ್ಲಿ ಸುಮಾರು 20-35 ಅಡಿ ಎತ್ತರದಿಂದ ನೀರು ಬೀಳುವುದು. ಯಾವುದೇ ಅಳುಕು, ಅಂಜಿಕೆ ಇಲ್ಲದೇ ಇಲ್ಲಿಗೆ ಬಂದ ಜನರು ಮೈಒಡ್ಡುತ್ತಾರೆ. ಮಕ್ಕಳು, ಯುವಕರಿಗೆ ಮಜಾ ನೀಡುತ್ತದೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಿಂದ ಸ್ಥಳೀಯ ವ್ಯಾಪಾರಿಗಳಿಗೂ ಹೆಚ್ಚಿನ ವ್ಯಾಪಾರ ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.