ಮಳೆ, ಸರ್ಕಾರ -ಮಧ್ಯವರ್ತಿಗಳ ಜೂಜಾಟದಲ್ಲಿ ರೈತ ಹೈರಾಣ

KannadaprabhaNewsNetwork |  
Published : Apr 18, 2026, 01:30 AM IST
 | Kannada Prabha

ಸಾರಾಂಶ

ದೇಶದ ಬೆನ್ನೆಲುಬಾದ ರೈತ ಇಂದು ಮಳೆ, ಸರ್ಕಾರದ ಮಂದಗತಿಯ ನೀತಿ ಮತ್ತು ಮಧ್ಯವರ್ತಿಗಳ ದರೋಡೆಯಿಂದಾಗಿ ಬೀದಿಗೆ ಬರುವಂತಾಗಿದೆ ಎಂದು ಹಾವೇರಿ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎಸ್. ಟಿ. ಬಾಗಲಕೋಟಿ ಅವರು ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುದೇಶದ ಬೆನ್ನೆಲುಬಾದ ರೈತ ಇಂದು ಮಳೆ, ಸರ್ಕಾರದ ಮಂದಗತಿಯ ನೀತಿ ಮತ್ತು ಮಧ್ಯವರ್ತಿಗಳ ದರೋಡೆಯಿಂದಾಗಿ ಬೀದಿಗೆ ಬರುವಂತಾಗಿದೆ ಎಂದು ಹಾವೇರಿ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎಸ್. ಟಿ. ಬಾಗಲಕೋಟಿ ಅವರು ಕಳವಳ ವ್ಯಕ್ತಪಡಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಹಾಗೂ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಆಯೋಜಿಸಿದ್ದ ಕರ್ನಾಟಕ ಕೃಷಿಯ ಪ್ರಸ್ತುತ ಸಮಸ್ಯೆಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿಯಲ್ಲಿ ಆದಾಯದ ಅಸಮಾನತೆ ಹೆಚ್ಚಾಗಿದ್ದು, ರಾಜ್ಯದಲ್ಲಿ ರೈತರ ಭೂ ಹಿಡುವಳಿಯ ಗಾತ್ರ ಸರಾಸರಿ 1.5 ಎಕರೆಗೆ ಕುಸಿದಿದೆ. ಇದರಿಂದಾಗಿ ಉತ್ಪಾದನೆ ಮತ್ತು ಆದಾಯ ಎರಡೂ ಕಡಿಮೆಯಾಗಿದ್ದು, ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಅವರು ವಿವರಿಸಿದರು. ವರುಣನ ಜೂಜಾಟ, ಪ್ರವಾಹ ಹಾಗೂ ಬರಗಾಲದಂತಹ ಅನಿಶ್ಚಿತತೆಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿರಿಧಾನ್ಯ ಹಾಗೂ ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರವು ಸಂಸ್ಕರಣಾ ಘಟಕಗಳು ಮತ್ತು ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ವಿಫಲವಾಗಿದೆ. ನಬರ್ಡ್ ಅಂಕಿ-ಅಂಶಗಳ ಪ್ರಕಾರ 14,700 ಸಹಕಾರಿ ಸಂಘಗಳು ದಿವಾಳಿಯಾಗಿರುವುದು ರೈತರ ಪಾಲಿಗೆ ಆತಂಕಕಾರಿ ವಿಷಯವಾಗಿದೆ. ಆದ್ದರಿಂದ ಸರ್ಕಾರವು ಹೋಬಳಿ ಮಟ್ಟದಲ್ಲಿ ರೈತರ ಸಂತೆಗಳು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದು ಒತ್ತಿ ಹೇಳಿದರು.ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎಚ್. ಎಸ್. ಮೋಹನ್ ಅವರು ಮಾತನಾಡಿ, ಜಾಗತೀಕರಣದ ನಂತರ ಕೃಷಿಯ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಶೇ. 50ಕ್ಕಿಂತ ಹೆಚ್ಚಿದ್ದ ಯುವ ಕೃಷಿಕರ ಪಾಲು ಇಂದು ಗಣನೀಯವಾಗಿ ಇಳಿಕೆಯಾಗಿದೆ. ಹವಾಮಾನ ವೈಪರೀತ್ಯ ಹಾಗೂ ಸಾಲದ ಬಾಧೆಯಿಂದಾಗಿ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದು, ತಿಂಗಳ ಸಂಬಳದ ಭದ್ರತೆ ನೀಡುವ ಉದ್ಯೋಗಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಮುನಿರಾಜು ಎಂ. ಸ್ವಾಗತಿಸಿದರು, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಪ್ರೊ. ರವೀಂದ್ರ ಕುಮಾರ್ ವಂದಿಸಿದರು ಹಾಗೂ ಸಹಪ್ರಾಧ್ಯಾಪಕ ಡಾ.ನೀಲಕಂಠ ಎನ್. ಟಿ. ಅವರು ನಿರೂಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ, ರಕ್ತದಾನ ಅತ್ಯಂತ ಶ್ರೇಷ್ಠ: ಸಂಜೀವ್ ಕುಮಾರ್
ಅಗಳಗಂಡಿ ಪಂಚಾಯ್ತಿ ಕಾರೆಮನೆ ದಲಿತ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಿ