ಜಿಲ್ಲೆಯ ಮಲೆನಾಡಿನ ಹಲವೆಡೆ ಮಳೆ

KannadaprabhaNewsNetwork | Published : Jun 18, 2024 12:46 AM

ಸಾರಾಂಶ

ಚಿಕ್ಕಮಗಳೂರು, ಕೆಲವು ದಿನಗಳಿಂದ ಬಿಡುವು ನೀಡಿದ್ದ ಮುಂಗಾರು ಮಳೆ ಸೋಮವಾರ ಜಿಲ್ಲೆಯ ಹಲವೆಡೆ ಮತ್ತೆ ಕಾಣಿಸಿಕೊಂಡಿತು. ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲೂಕಿನ ಹಲವೆಡೆ ಮಳೆಯಾಗಿದ್ದು, ಇನ್ನುಳಿದ ತಾಲೂಕುಗಳಲ್ಲಿ ಬೆಳಿಗ್ಗೆ ಬಿಸಿಲು, ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಇತ್ತು.

ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲೂಕಿನ ಹಲವೆಡೆ ಮಳೆ

ಕನ್ನಡಪ್ರಭ

ವಾರ್ತೆ, ಚಿಕ್ಕಮಗಳೂರು

ಕೆಲವು ದಿನಗಳಿಂದ ಬಿಡುವು ನೀಡಿದ್ದ ಮುಂಗಾರು ಮಳೆ ಸೋಮವಾರ ಜಿಲ್ಲೆಯ ಹಲವೆಡೆ ಮತ್ತೆ ಕಾಣಿಸಿಕೊಂಡಿತು.

ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲೂಕಿನ ಹಲವೆಡೆ ಮಳೆಯಾಗಿದ್ದು, ಇನ್ನುಳಿದ ತಾಲೂಕುಗಳಲ್ಲಿ ಬೆಳಿಗ್ಗೆ ಬಿಸಿಲು, ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಇತ್ತು.

ಚಿಕ್ಕಮಗಳೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ದಿಢೀರ್ ಮಳೆ ಬಂದಿತು. ನಗರದ ಹೌಸಿಂಗ್‌ ಬೋರ್ಡ್‌, ಎಐಟಿ ವೃತ್ತದವರೆಗೆ ಕೆಲ ಹೊತ್ತು ಉತ್ತಮವಾಗಿ ಮಳೆ ಬಂದಿತು. ಆದರೆ, ಬಹುತೇಕ ಪ್ರದೇಶಗಳಲ್ಲಿ ಮಳೆ ಇರಲಿಲ್ಲ.

ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್‌ ಸುತ್ತಮುತ್ತ ಮಧ್ಯಾಹ್ನ 2.45 ಕ್ಕೆ ಆರಂಭವಾದ ಮಳೆ ಒಂದು ಗಂಟೆಗೂ ಅಧಿಕ ಕಾಲ ಒಂದೇ ಸಮನೆ ಮಳೆ ಸುರಿಯಿತು. ಗಾಳಿ ಇಲ್ಲದ ಕಾರಣ ಉತ್ತಮ ಮಳೆ ಯಾಯಿತು. ಮಳೆಯಿಂದ ರಸ್ತೆಯಲ್ಲಿ ನೀರು ಹರಿಯಿತು. ವಾಹನಗಳು ರಸ್ತೆಯ ಮೇಲಿನ ನೀರನ್ನು ಚಿಮ್ಮಿ ಹೋಗುವ ದೃಶ್ಯ ಕಂಡು ಬಂತು. ಕಳೆದ ಮೂರು ದಿನಗಳ ಹಿಂದೆ ಕೈಕೊಟ್ಟಿದ್ದ ಮಳೆ ಸೋಮವಾರ ಇಳೆಗೆ ತಂಪೆರೆಯಿತು.

ಬಣಕಲ್ ಪಟ್ಟಣದ ಝೆಡ್ ಟವರ್ ಬಳಿಯ ಹೆದ್ದಾರಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ಯಿಂದ ನೀರು ರಸ್ತೆಯಲ್ಲಿ ಶೇಖರಣೆಯಾಗಿ ಚರಂಡಿಗೆ ಹರಿಯದೇ ಅವ್ಯವಸ್ಥೆ ಅಗರವಾಗಿದೆ. ಚರಂಡಿ ಕೂಡ ಈ ಭಾಗದಲ್ಲಿ ಬಂದ್ ಆಗಿದ್ದು ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿಗಳು ಚರಂಡಿ ವ್ಯವಸ್ಥೆ ಸರಿಪಡಿಸಿ ರಸ್ತೆಯ ನೀರನ್ನು ಚರಂಡಿ ಸಾಗುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಳಸ ತಾಲೂಕಿನ ಬಾಳೆಹೊಳೆ, ಕಗ್ಗನಳ್ಳ, ಮಹಲ್‌ಗೋಡು ಸುತ್ತಮುತ್ತ ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಮಹಲ್‌ಗೋಡು ಸಮೀಪ ದಲ್ಲಿರುವ ಸಣ್ಣ ಸೇತುವೆಯಲ್ಲಿ ಕಸ ಕಟ್ಟಿದ್ದರಿಂದ ನೀರು ಮುಂದೆ ಸರಾಗವಾಗಿ ಹರಿಯಲು ಆಗದೆ, ರಸ್ತೆಯ ಮೇಲೆ ಹಳ್ಳದ ಮಾದರಿಯಲ್ಲಿ ಹರಿಯುತ್ತಿದ್ದರಿಂದ ಕಳಸದಿಂದ ಬಾಳೆಹೊನ್ನೂರಿಗೆ ಬರುವ ರಸ್ತೆ ಸಂಪರ್ಕ ಸುಮಾರು ಒಂದು ಗಂಟೆಗಳ ಕಾಲ ಬಂದ್‌ ಆಗಿತ್ತು.

ಶೃಂಗೇರಿ ಪಟ್ಟಣದಲ್ಲಿ ಮಳೆ ಇರಲಿಲ್ಲ, ಆದರೆ, ನೆಮ್ಮಾರ್‌, ಕೆರೆಕಟ್ಟೆ ಸುತ್ತಮುತ್ತ ಸಾಧಾರಣ ಮಳೆ ಯಾಗಿದೆ. ಎನ್‌.ಆರ್‌.ಪುರ ಹಾಗೂ ಕೊಪ್ಪ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಗ್ರಾಮೀಣ ಭಾಗದಲ್ಲಿ ಕೆಲವೆಡೆ ಮಳೆಯಾಗಿದೆ. ಕಡೂರು ಹಾಗೂ ತರೀಕೆರೆ, ಅಜ್ಜಂಪುರ ತಾಲೂಕುಗಳಲ್ಲಿ ಬಿಸಿಲಿತ್ತು.

17 ಕೆಸಿಕೆಎಂ 5ಮೂಡಿಗೆರೆ ತಾಲೂಕಿನ ಬಣಕಲ್‌ ಪಟ್ಟಣದಲ್ಲಿ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತಿರುವುದು.

Share this article