ಕನಕಪುರ: ತೈಲ ಬೆಲೆ ಏರಿಕೆ ವಿರೋಧಿಸಿ ಪ್ರಗತಿಪರ ಸಂಘಟನೆ ಹೋರಾಟಗಾರರು ಸೈಕಲ್ ಮತ್ತು ಟಾಂಗಾ ಸವಾರಿ, ದ್ವಿಚಕ್ರ ವಾಹನಗಳಿಗೆ ಹಗ್ಗದಿಂದ ಕಟ್ಟಿ ಎಳೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಲೋಕಸಭಾ ಚುನಾವಣೆಗೂ ಮುನ್ನ ನಾವು ಯಾವುದೇ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಆದರೆ ಚುನಾವಣೆ ಮುಗಿದು ಫಲಿತಾಂಶ ಹೊರ ಬಿದ್ದ ತಿಂಗಳಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ಮಾತಿಗೆ ತಪ್ಪಿ ಗೂಸುಂಬೆ ಆಟವಾಡುತ್ತಾ ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಹೇಳುವದೊಂದು ಮಾಡುವುದು ಮತ್ತೊಂದು, ನಮಗೆ ಬಿಟ್ಟಿ ಭಾಗ್ಯಗಳನ್ನು ಕೊಡಿ ಎಂದು ರಾಜ್ಯದ ಜನರು ನಿಮ್ಮನ್ನ ಕೇಳಿರಲಿಲ್ಲ. ಬಿಟ್ಟಿ ಭಾಗ್ಯಗಳನ್ನು ಕೊಡುವುದಾಗಿ ಘೋಷಿಸಿ ಮಧ್ಯೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದೀರಿ. ಇದರಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತು ಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದೀರಿ. ಜನರನ್ನು ವಂಚನೆ ಮಾಡುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಕಳೆದ ವರ್ಷ ಮಳೆ ಇಲ್ಲದೆ ರಾಜ್ಯದಲ್ಲಿ ಬರಗಾಲ ಆವರಿಸಿದೆ. ರೈತರು ಬರದಿಂದ ತತ್ತರಿಸಿದ್ದಾರೆ. ರೈತರು ಮತ್ತು ಜನಸಾಮಾನ್ಯರು ಮೊದಲೇ ತೊಂದರೆಯಲ್ಲಿದ್ದಾರೆ. ಹೀಗಿದ್ದರೂ ಸರ್ಕಾರ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತೆ ತೈಲ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಾನು ರೈತ ಕುಟುಂಬದಿಂದ ಬಂದವನು ರೈತರ ಕಷ್ಟ ಸುಖಗಳ ಬಗ್ಗೆ ನನಗೆ ಅರಿವಿದೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಏಕಿ 3ರಿಂದ 3.50ವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಎಲ್ಲಾ ಅಗತ್ಯ ವಸ್ತುಗಳು ಗಗನಮುಖಿಯಾಗುತ್ತಿವೆ. ರೈತರು ಹಾಕುವ ಹಾಲಿಗೆ ಪ್ರೋತ್ಸಾಹ ಧನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮೀ ಉಚಿತ ಸಾರಿಗೆ ಸೌಲಭ್ಯ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ನೀವು ರಾಜ್ಯವನ್ನು ದಿವಾಳಿ ಮಾಡಿದ್ದೀರಿ ಎಂದು ಆರೋಪಿಸಿ, ರಾಜ್ಯ ಸರ್ಕಾರ ಏರಿಕೆ ಮಾಡಿರುವ 3.5೦ ಪೆಟ್ರೋಲ್ ದರವನ್ನು ಕೂಡಲೆ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗನಂದ, ಪ್ರಗತಿಪರ ಸಂಘಟನೆ ಮುಖಂಡ ಕೆ.ಆರ್.ಸುರೇಶ್, ಸ್ವ ಕರವೇ ವೇದಿಕೆ ಭಾಸ್ಕರ್, ಕನ್ನಡ ಸೇನೆ ಅಧ್ಯಕ್ಷ ಜಯಸಿಂಹ, ವೈಭವ ಕರ್ನಾಟಕ ದುರ್ಗೇಶ್, ಗಬ್ಬಾಡಿ ಕಾಡೇಗೌಡ, ಗಿರೀಶ್, ಮುಖಂಡ ಆನಮಾನ ಹಳ್ಳಿ ನಾಗರಾಜು, ಚೀರಣ ಕುಪ್ಪೆ ರಾಜೇಶ್, ರಾಜ್ ಮೌರ್ಯ, ನವೀನ್, ಗೋಪಿ, ಜಗದೀಶ್ ಸೇರಿದಂತೆ ರೈತ ಸಂಘದ ಮುಖಂಡರು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 2(2):ತೈಲಬೆಲೆ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೋರಾಟಗಾರರು ಸೈಕಲ್ ಮತ್ತು ಟಾಂಗಾ ಸವಾರಿ ಮಾಡಿ ದ್ವಿಚಕ್ರ ವಾಹನಗಳಿಗೆ ಹಗ್ಗಕಟ್ಟಿ ಎಳೆದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.