ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದೆ. ನದಿ ತೋಡುಗಳು ತುಂಬಿ ಹರಿಯುತ್ತಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದ್ದು, ನದಿ, ತೋಡುಗಳು ತುಂಬಿ ಹರಿಯುತ್ತಿವೆ. ಮಂಗಳವಾರ ಬಿರುಸಿನ ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿ ಜನಜೀವನ ಅಸ್ತವ್ಯಸ್ತಗೊಂಡಿತು.
ರಭಸದ ಗಾಳಿಯಿಂದ ಹಲವೆಡೆ ಮನೆ, ಶೆಡ್‌ಗಳಿಗೆ ಹಾನಿಯಾಗಿದೆ. ಮನೆಗೆ ಹಾಸಿದ್ದ ಶೀಟ್‌ಗಳು ಹಾರಿಹೋಗಿ ನಷ್ಟ ಸಂಭವಿಸಿದೆ.
ಕರಡ ಗ್ರಾಮದ ಟಿ.ಡಿ. ಚಿಣ್ಣಪ್ಪ ಎಂಬವರ ವಾಸದ ಮನೆಯ ಪಕ್ಕದಲ್ಲಿದ್ದ ಶೌಚಾಲಯ ಕುಸಿದು ಬಿದ್ದು ನಷ್ಟ ಸಂಭವಿಸಿದೆ.
ಕೊಳಕೇರಿ ಗ್ರಾಮದ ತಟ್ಟಂಡ ವಿಮಲಾ ಅವರ ವಾಸದ ಮನೆಯ ಮೇಲ್ಛಾವಣಿ ಮಳೆಯಿಂದ ಹಾನಿಯಾಗಿದೆ. ಬಾವಲಿ ಗ್ರಾಮದ ಪಾಂಡಂಡ ಕುಟುಂಬಸ್ಥರ ಐನ್‌ಮನೆ ಕುಸಿದು ಬಿದ್ದು ಪೂರ್ಣ ಹಾನಿಯಾಗಿದೆ. ಐನ್‌ಮನೆಯಲ್ಲಿ ಯಾರು ವಾಸ ಇಲ್ಲದೇ ಇದ್ದುದರಿಂದ ಸಮಸ್ಯೆ ಉಂಟಾಗಿಲ್ಲ. ಸ್ತಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಗ್ರಾಮಲೆಕ್ಕಿಗರು, ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಎರಡು ದಿನಗಳಿಂದ ಬಿರುಸುಗೊಂಡ ಮಳೆಯಿಂದಾಗಿ ಕಾವೇರಿ ನದಿ, ತೊರೆಗಳು ತುಂಬಿ ಹರಿಯುತ್ತಿದೆ. ಇದರಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ನದಿ ದಡದಲ್ಲಿರುವ ಗದ್ದೆ ತೋಟಗಳು ಮುಳುಗಡೆಯಾಗಿ ಸಮಸ್ಯೆ ಎದುರಾಗಿದೆ. ಇಲ್ಲಿಗೆ ಸಮೀಪದ ಕಾವೇರಿ ನದಿ ಪಾತ್ರದಲ್ಲಿರುವ ಚೆರಿಯ ಪರಂಬುವಿನಲ್ಲಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿರುವುದರಿಂದಾಗಿ ಕಂದಾಯ ಇಲಾಖೆಯ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
---------------------------------
ವಿವಿಧೆಡೆ ಭಾರಿ ಮಳೆ: ನಾಪೋಕ್ಲು ಹೋಬಳಿಯಲ್ಲಿ ಹಾನಿಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಭಾರಿ ಮಳೆಯಾಗಿದೆ. ನಾಪೋಕ್ಲು ಹಾಗೂ ಸೋಮವಾರಪೇಟೆಯಲ್ಲಿ ಬಾರಿ ಮಳೆಗೆ ಹಾನಿಯುಂಟಾಗಿದೆ. ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ನದಿ ದಡದಲ್ಲಿರುವ ಗದ್ದೆ ತೋಟಗಳು ಮುಳುಗಡೆಯಾಗಿವೆ. ಸೋಮವಾರಪೇಟೆಯ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕುಸಿದಿದೆ.
ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 31.52 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ 29.37 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 10.75 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 32.12 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 76.45 ಮಿ.ಮೀ. ಮಳೆಯಾಗಿದೆ. ಕುಶಾಲನಗರ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.90 ಮಿ.ಮೀ. ಮಳೆಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.