ಮಳೆ ಚುರುಕು: ಚಾರ್ಮಾಡಿ ಘಾಟಿ ಹೆದ್ದಾರಿಗೆ ಹೊಸ ಕಳೆ

KannadaprabhaNewsNetwork |  
Published : Jul 07, 2026, 03:15 AM IST
ಘಾಟಿಯಲ್ಲಿ ಜಲಪಾತ | Kannada Prabha

ಸಾರಾಂಶ

ಕಡಿದಾದ 11 ಹೇರ್‌ಪಿನ್ ತಿರುವುಗಳನ್ನು ಹೊಂದಿರುವ ಆಕರ್ಷಕ ವನ್ಯ ಪರಿಸರವನ್ನು ಹೊಂದಿರುವ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕಾಗುತ್ತಿರುವಂತೆ ಇಲ್ಲಿನ ಸೌಂದರ್ಯ ಪ್ರವಾಸಿಗರನ್ನು ಮನಸೂರೆಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಡಿದಾದ 11 ಹೇರ್‌ಪಿನ್ ತಿರುವುಗಳನ್ನು ಹೊಂದಿರುವ ಆಕರ್ಷಕ ವನ್ಯ ಪರಿಸರವನ್ನು ಹೊಂದಿರುವ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕಾಗುತ್ತಿರುವಂತೆ ಇಲ್ಲಿನ ಸೌಂದರ್ಯ ಪ್ರವಾಸಿಗರನ್ನು ಮನಸೂರೆಗೊಳ್ಳುತ್ತಿದೆ.

ಈ ಬಾರಿ ಒಂದು ತಿಂಗಳು ಮಳೆ ತಡವಾಗಿ ಸುರಿದಿದ್ದು, ಪೇಲವಗೊಂಡಿದ್ದ ಜಲಪಾತ, ತೊರೆಗಳು ಇದೀಗ ಇಲ್ಲಿನ ಆಕರ್ಷಣೆ ಹೆಚ್ಚಿಸಿಕೊಂಡಿವೆ. ವರ್ಷವಿಡಿ ಕಣ್ಮನ ಸೆಳೆಯುವ ಈ ಘಾಟಿಯ ಮಳೆಗಾಲದ ಸೌಂದರ್ಯವಂತೂ ವರ್ಣಿಸಲದಳ. ಅಲ್ಲಲ್ಲಿ ಚಿಕ್ಕ ಚಿಕ್ಕ ತೊರೆಗಳು, ಕಲ್ಲುಗಳಿಂದ ಮೇಲಿಂದ ಧುಮ್ಮಿಕ್ಕುವ ನೀರು, ಪುಟ್ಟ ಪುಟ್ಟ ಜಲಪಾತ, ತುಂಬಿ ಹರಿಯುವ ಹಳ್ಳ, ಕೊಳ್ಳಗಳು ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹೋದಂತೆ ತೀವ್ರಗೊಳ್ಳುವ ಮಂಜು, ಸದಾ ಸುರಿಯುವ ಮಳೆ, ರಸ್ತೆ ಬದಿ ಆಳವಾದ ಕಮರಿಗಳು, ಸುತ್ತಲ ಪ್ರಕೃತಿ ಸೌಂದರ್ಯ ಹಾದಿಯಲ್ಲಿ ಸಿಗುವ ಪಕ್ಷಿ ಪ್ರಾಣಿಗಳು ಇವನ್ನೆಲ್ಲ ನೋಡುತ್ತಾ ಸಾಗುವಾಗ ಘಾಟಿ ಕ್ರಮಿಸಿದ್ದೇ ತಿಳಿಯುವುದಿಲ್ಲ.

ಘಾಟಿ ಭಾಗದ ಸೌಂದರ್ಯವನ್ನು ಪ್ರಯಾಣದ ಸಮಯದಲ್ಲಿ ವೀಕ್ಷಿಸುತ್ತ ಸಾಗಬಹುದು. ಆದರೆ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ವೀಕ್ಷಿಸಲು ಅವಕಾಶವಿಲ್ಲ‌. ಅಪಾಯಕಾರಿ ಬಂಡೆ ಏರುವುದು ತಡೆಗೋಡೆ ಹತ್ತುವುದು, ತೊರೆಗಳಲ್ಲಿ ಇಳಿಯುವುದಕ್ಕೆ ಅವಕಾಶವಿಲ್ಲ. ಗಸ್ತು ನಿರತ ಪೊಲೀಸರು ಪ್ರವಾಸಿಗರ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಅನಪೇಕ್ಷಿತ ಚಟುವಟಿಕೆಗಳು ಕಂಡುಬಂದರೆ ದಂಡ ವಿಧಿಸುತ್ತಾರೆ. ಆದರೆ ಕೆಲವೊಂದು ಪ್ರವಾಸಿಗರು ಅನಗತ್ಯ ಆಟಾಟೋಪ ನಡೆಸಿ ಅಪಾಯಕ್ಕೆ ಆಹ್ವಾನ ತಂದುಕೊಳ್ಳುತ್ತಾರೆ.

ಎಚ್ಚರ ಅಗತ್ಯ:

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಸುಮಾರು 25 ಕಿ.ಮೀ. ಉದ್ದದ ಚಾರ್ಮಾಡಿ ಘಾಟಿಯಲ್ಲಿ ಇದೀಗ ಎರಡು ಎತ್ತರದ ಹಾಗೂ ಸುಮಾರು 10 ಸಾಮಾನ್ಯ ಗಾತ್ರದ ಜಲಪಾತಗಳು, 15ಕ್ಕಿಂತ ಅಧಿಕ ತೊರೆಗಳು ಮೈದುಂಬಿಕೊಂಡಿವೆ. ರಮಣೀಯ ಸೌಂದರ್ಯವನ್ನು ಆಸ್ವಾದಿಸುತ್ತಾ ಇಲ್ಲಿನ ಆಕರ್ಷಕ ತೊರೆ, ತೋಡುಗಳಲ್ಲಿ ಇಳಿಯುವುದು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಘಾಟಿ ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಲಭ್ಯವಿಲ್ಲದ ಕಾರಣ ತ್ವರಿತ ಸಂಪರ್ಕ ಸಾಧ್ಯವಿಲ್ಲ. ಘಾಟಿ ಮೂಲಕ ಪ್ರಯಾಣಿಸುವಾಗ ಅಗತ್ಯ ಆಹಾರ ನೀರು ಜತೆಗಿದ್ದರೆ ಹೆಚ್ಚು ಕ್ಷೇಮ. ಆದಷ್ಟು ರಾತ್ರಿ ಪ್ರಯಾಣ ಮಾಡದಿರುವುದು ಉತ್ತಮ.

*ಈ ಬಾರಿ ಬೇಸಿಗೆಯಲ್ಲಿ ಆಗಾಗ ಮಳೆ ಸುರಿದ ಕಾರಣ ಚಾರ್ಮಾಡಿ ಪರಿಸರದಲ್ಲಿ ಕಾಡ್ಗಿಚ್ಚು ಕಡಿಮೆ ಇದ್ದುದರಿಂದ ಹಸಿರು ನಳ ನಳಿಸುತ್ತಿದೆ.

*ಹಿಂದಿಗಿಂತ ರಸ್ತೆ ಅಗಲಗೊಂಡಿರುವುದರಿಂದ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಇಲ್ಲ

*ತಡೆಗೋಡೆಗಳು ಬಹುತೇಕ ಪೂರ್ಣಗೊಂಡಿವೆ.

*ಘಾಟಿಗೆ ಮಳೆಗಾಲದಲ್ಲಿ ಮುಸುಕು ಹೊದೆಯುವ ಮಂಜು.

*ಘಾಟಿ ಪ್ರದೇಶದಲ್ಲಿ ಕಾಡಾನೆ, ಚಿರತೆ ಹಾಗೂ ಇನ್ನಿತರ ವನ್ಯಜೀವಿಗಳ ತಿರುಗಾಟವಿದ್ದು, ಜಾಗ್ರತೆ ಅಗತ್ಯ.

*ಹಲವೆಡೆ ರಸ್ತೆ ಬದಿ ಅಪಾಯಕಾರಿ ಮರಗಳು.

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಳೆಗಾಲದ ನಿರ್ವಹಣೆ ನಡೆಸಲಾಗಿದೆ. ಎರಡು ಜೆಸಿಬಿ ಹಾಗೂ ಕಾರ್ಮಿಕರ ತಂಡ ಇಲ್ಲಿ ಸನ್ನದ್ಧ ಸ್ಥಿತಿಯಲ್ಲಿದೆ.

-ಗುರುಪ್ರಸಾದ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ,ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿಗೆ ಒಳಹರಿವು ಆರಂಭ; ಅವಳಿ ಜಿಲ್ಲೆಯ ಜನತೆಯಲ್ಲಿ ಸಂಭ್ರಮ
ಪ್ಯಾಸೆಂಜರ್‌ ರೈಲು ಆರಂಭಿಸಲು ಸಂಸದ ಗದ್ದಿಗೌಡರ ಸ್ಪಂದನೆ