ಮಳೆಗಾಲದಲ್ಲಿ ಬಿರು ಬಿಸಿಲು, ಬಿತ್ತನೆ, ನಾಟಿ ಮಾಡಲು ಕೈಕೊಟ್ಟ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ.
ಜು. 15 ರ ವರೆಗೆ ವಾಡಿಕೆಗಿಂತ ಶೇ.25ರಷ್ಟು ಕಡಿಮೆ ಮಳೆ । ಆಷಾಢದಲ್ಲೂ ರಣರಣ ಬಿಸಿಲು
ವಸಂತಕುಮಾರ್ ಕತಗಾಲ
ಕನ್ನಡಪ್ರಭ ವಾರ್ತೆ ಕಾರವಾರ
ಮಳೆಗಾಲದಲ್ಲಿ ಬಿರು ಬಿಸಿಲು, ಬಿತ್ತನೆ, ನಾಟಿ ಮಾಡಲು ಕೈಕೊಟ್ಟ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ.
ಅಬ್ಬರಡ ಜಡಿ ಮಳೆ ಬರಬೇಕಾದ ಆಷಾಢದಲ್ಲೂ ರಣರಣ ಬಿಸಿಲು. ಬಿತ್ತನೆ, ನಾಟಿಯ ಸಂಭ್ರಮ ಕಾಣುವ ಬತ್ತದ ಗದ್ದೆಗಳಲ್ಲಿ ಹತಾಶಗೊಂಡ ರೈತರು ಮುಗಿಲಿನತ್ತ ನೋಡುತ್ತ ಕುಳಿತಿರುವ ನೋಟ ಸಾಮಾನ್ಯವಾಗಿದೆ.
ಕೇವಲ ಇದೊಂದೇ ವಾರದಲ್ಲಿ ಶೇ.82ರಷ್ಟು ಮಳೆಯ ಕೊರತೆ ಉಂಟಾಗಿದೆ. ಪ್ರಸಕ್ತ ಸಾಲಿನ ಜೂನ್ ತಿಂಗಳಿನಿಂದ ಜು. 15 ರ ವರೆಗೆ ವಾಡಿಕೆಗಿಂತ ಶೇ.25ರಷ್ಟು ಕಡಿಮೆ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 1265 ಮಿಮೀ ಮಳೆ ಬೀಳಬೇಕಾಗಿದ್ದು, 945.4 ಮಳೆ ಬಂದಿದೆ.
ಅಂಕೋಲಾ ತಾಲೂಕಿನಲ್ಲಿ ಶೇ.31, ಭಟ್ಕಳ ಶೇ.37, ಹಳಿಯಾಳ ಶೇ.31, ಹೊನ್ನಾವರ ಶೇ.19, ಕಾರವಾರ ಶೇ.20, ಕುಮಟಾ ಶೇ.21, ಮುಂಡಗೋಡ ಶೇ.23, ಸಿದ್ದಾಪುರ ಶೇ.12, ಶಿರಸಿ ಶೇ.8, ಸೂಪಾ ಶೇ.11, ಯಲ್ಲಾಪುರ ಶೇ.38 ಮತ್ತು ದಾಂಡೇಲಿಯಲ್ಲಿ ಶೇ.12ರಷ್ಟು ಮಳೆಯ ಕೊರತೆ ಕಂಡುಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ವಾಡಿಕೆ ಮಳೆ 217.5 ಮಿಮೀ ಆಗಬೇಕಾಗಿದ್ದು, ಆದರೆ 38.4 ಮಿಮೀ ಮಾತ್ರ ಮಳೆ ಆಗುವ ಮೂಲಕ ಶೇ.82ರಷ್ಟು ಮಳೆಯ ಕೊರತೆಯಾಗಿದೆ.
ಜಿಲ್ಲೆಯ ಜೋಯಿಡಾ, ಮುಂಡಗೋಡ, ಹಳಿಯಾಳ, ಯಲ್ಲಾಪುರಗಳಲ್ಲಿ ಬತ್ತವನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ. ಇದರ ಜೊತೆ ಯಲ್ಲಾಪುರ, ಮುಂಡಗೋಡ, ಹಳಿಯಾಳದಲ್ಲಿ ಮೆಕ್ಕೆಜೋಳವನ್ನೂ ಬೆಳೆಯಲಾಗುತ್ತದೆ.
ಒಟ್ಟೂ 58,401 ಹೆಕ್ಟೇರ್ ಬೆಳೆ ಕ್ಷೇತ್ರದ ಗುರಿಗೆ ಈ ತನಕ 37,249 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯ ಬಿತ್ತನೆ, ನಾಟಿ ಕಾರ್ಯ ನಡೆದಿದೆ. ಆದರೆ ಮಳೆಯ ಅಭಾವದಿಂದ ಬಿತ್ತನೆ, ನಾಟಿ ಮಾಡಿದ್ದೂ ನಾಶವಾಗುವ ಚಿಂತೆ ರೈತರನ್ನು ಕಾಡುತ್ತಿದೆ. ಕೃಷಿ ಇಲಾಖೆ ಪ್ರಕಾರ 2026-27ನೇ ಮುಂಗಾರು ಹಂಗಾಮಿನಿಂದ ಈ ತನಕ ವಾಡಿಕೆ ಮಳೆ 1162 ಮಿ.ಮೀ. ಇದ್ದು ಪ್ರಸ್ತುತ 792.1 ಮಿಮೀ ಮಳೆಯಾಗಿದ್ದು ಶೇ. 32ರಷ್ಟು ಮಳೆ ಕೊರತೆ ಉಂಟಾಗಿದೆ.
ಮಳೆಯಾಗದೆ ಇದೇ ರೀತಿ ಮುಂದುವರಿದರೆ ಬರಪೀಡಿತ ಪ್ರದೇಶ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ರೈತ ವಲಯದಿಂದ ಕೂಗು ಕೇಳಿಬರುತ್ತಿದೆ.ರೈತ ಆತ್ಮಹತ್ಯೆ
ಸಾಲಬಾಧೆ ಜೊತೆಗೆ ಈ ಬಾರಿ ಕೈಕೊಟ್ಟ ಮಳೆಯಿಂದಾಗಿ ಬೆಳೆಯೂ ಕೈಗೆ ಸಿಗದು ಎಂಬ ಹತಾಶೆಯಿಂದ ಮುಂಡಗೋಡ ತಾಲೂಕಿನ ಹುನಗುಂದದ ರೈತ ಫಕ್ಕೀರಗೌಡ ಬಸನಗೌಡ ಪಾಟೀಲ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯ ಮಳೆಯ ಕೊರತೆ ಆಗಿದೆ. ಆದರೆ ಮುಂದಿನ ಒಂದು ವಾರ ಉತ್ತರ ಕನ್ನಡ ಜಿಲ್ಲೆಯ ರೈತರ ಪಾಲಿಗೆ ನಿರ್ಣಾಯಕವಾಗಲಿದೆ. ಮಳೆ ಬಾರದೆ ಇದ್ದಲ್ಲಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಶಿವಪ್ರಸಾದ ಗಾಂವಕರ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.