ಮಳೆ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ: ಕೃಷ್ಣಬೈರೇಗೌಡ

KannadaprabhaNewsNetwork |  
Published : May 02, 2026, 01:30 AM IST
ಪೊಟೋ: 01ಎಸ್‌ಎಂಜಿಕೆಪಿ01ಶಿವಮೊಗ್ಗ ಗ್ರಾಮಾಂತರ ಭಾಗದ ಮೈದೊಳಲು, ಮಲ್ಲಿಗೇನಹಳ್ಳಿ, ಅರಹತೊಳಲು ಗ್ರಾಮಗಳಿಗೆ ಶುಕ್ರವಾರ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭೇಟಿ ನೀಡಿ ಬಿರುಗಾಳಿ ಮಳೆಯಿಂದ ಉಂಟಾದ ಹಾನಿ ಪರಿಶೀಲಿಸಿದರು.  | Kannada Prabha

ಸಾರಾಂಶ

ಬಿರುಗಾಳಿ ಮಳೆಯಿಂದ ಭಾರಿ ಅನಾಹುತ ಉಂಟಾದ ಶಿವಮೊಗ್ಗ ಗ್ರಾಮಾಂತರ ಭಾಗದ ಮೈದೊಳಲು, ಮಲ್ಲಿಗೇನಹಳ್ಳಿ, ಅರಹತೊಳಲು ಗ್ರಾಮಗಳಿಗೆ ಶುಕ್ರವಾರ ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿ, ವೀಕ್ಷಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿರುಗಾಳಿ ಮಳೆಯಿಂದ ಭಾರಿ ಅನಾಹುತ ಉಂಟಾದ ಶಿವಮೊಗ್ಗ ಗ್ರಾಮಾಂತರ ಭಾಗದ ಮೈದೊಳಲು, ಮಲ್ಲಿಗೇನಹಳ್ಳಿ, ಅರಹತೊಳಲು ಗ್ರಾಮಗಳಿಗೆ ಶುಕ್ರವಾರ ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿ, ವೀಕ್ಷಣೆ ನಡೆಸಿದರು.

ಮಲ್ಲಿಗೇನಹಳ್ಳಿ ಭೋವಿ ಕಾಲೋನಿಯ ರೈತರೊಬ್ಬರ ತೋಟಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಬಳಿಕ ರೈತರೊಂದಿಗೆ ಮಾತನಾಡಿದ ಸಚಿವರು, ಮಳೆ, ಬಿರುಗಾಳಿಯಿಂದಾದ ಆಸ್ತಿ ಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಯುತ್ತಿದೆ. ಅದು ಮುಗಿದ ತಕ್ಷಣವೇ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭಾರಿ ಪ್ರಮಾಣದ ಬೆಳೆನಷ್ಟವಾಗಿದೆ. ಸಾಲ ಶೂಲ ಮಾಡಿ ಬೆಳೆ ಬೆಳೆದಿದ್ದೇವೆ, ಈಗ ದಾರಿ ಕಾಣುತ್ತಿಲ್ಲ, ಕೆಲವರು ವಿಷ ಸೇವಿಸಲು ಮುಂದಾಗಿದ್ದನ್ನು ತಪ್ಪಿಸಿದ್ದೇವೆ ಎಂದು ರೈತರು ಸಚಿವರ ಬಳಿ ಅಳಲು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ಅಂತಹ ಅನಾಹುತ ಮಾಡಿಕೊಳ್ಳುವ ಆತುರ ಬೇಡ. ರಜೆ ಇದ್ದರೂ ಕೂಡ ಇವತ್ತು ಅಧಿಕಾರಿಗಳು ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆನ್ನುವುದು ಇದರ ಉದ್ದೇಶ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಇಲ್ಲಿಗೆ ಬಂದು ಹೋಗಿದ್ದಾರೆ. ಮಾಹಿತಿ ಪಡೆದಿದ್ದೇನೆ ಎಂದ ಸಚಿವರು, ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಬಗರ್ ಹುಕುಂ ರೈತರಿಗೆ ಅರಣ್ಯ ಇಲಾಖೆಯವರು ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಇಲ್ಲಿ ಉಳುವೆ ಮಾಡುತ್ತಿದ್ದೇವೆ, ನಮಗೆ ಅರಣ್ಯ ಇಲಾಖೆ ತೊಂದರೆ ಕೊಡುವುದನ್ನು ತಪ್ಪಿಸಬೇಕೆಂದು ರೈತರು ಇದೇ ವೇಳೆ ತಮ್ಮ ಅಹವಾಲು ಹೇಳಿಕೊಂಡರು.

ಸಚಿವರು ಇದಕ್ಕೆ ಪ್ರತಿಕ್ರಿಯಿಸಿ, ಕಾನೂನು ಸಮಸ್ಯೆಗಳಿವೆ. ಕೋರ್ಟ್ ಆದೇಶವಿದೆ. ಈ ಹಂತದಲ್ಲಿ ನಾವು ಅರಣ್ಯ ಇಲಾಖೆಗೆ ತಡೆಯೋದಿಕ್ಕೆ ಆಗೋದಿಲ್ಲ. ಆದರೆ ತೊಂದರೆ ಕೊಡ್ಬೇಡಿ ಅಂತ ಮಾತ್ರ ಹೇಳಬಹುದು. ಆ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಮಾತನಾಡಿ, ಬೆಳೆ ವಿಮೆ ಯೋಜನೆ ಇದಕ್ಕೆ ಅನ್ವಯ ಆಗಲ್ಲ, ಬಿಸಿಲಿನ ತಾಪ ಅಂತ ಬೆಳೆನಷ್ಟ. ತೋರಿಸಿದರೂ ಪರಿಹಾರ ತುಂಬಾ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಮಳೆಗಾಲ ಬೆಳೆವಿಮೆ ಯೋಜನೆಯಾದರೆ ಕನಿಷ್ಡ ೧ ಲಕ್ಷ ರು. ಪರಿಹಾರ ಸಿಗುತ್ತದೆ. ಈಗ ರೈತರಿಗೆ ವಿಮೆ ಯೋಜನೆಯ ಸೌಲಭ್ಯ ಸಿಗದಂತಾಗಿದೆ. ಹಾಗಾಗಿ ಪರಿಹಾರದ ಮೊತ್ತವನ್ನು ಹೆಚ್ಚಿಸಿ, ತಕ್ಷಣವೇ ಕೊಡಬೇಕು ಎಂದು ಒತ್ತಾಯಿಸಿದರು.

ಜಿಪಂ ಸಿಇಒ ಎನ್.ಹೇಮಂತ್ ಇದಕ್ಕೆ ಪ್ರತಿಕ್ರಿಯಿಸಿ, ಬೆಳೆ ವಿಮೆ ಸೌಲಭ್ಯದ ಬಗೆಗಿನ ಕಂಡಿಷನ್ಸ್ ಹೇಗೆ, ಏನು? ಅವಕಾಶ ಇದೆಯೇ ಎನ್ನುವುದನ್ನು ಪರಿಶೀಲನೆ ಮಾಡಿವೆ. ಅವಕಾಶವಿದ್ದರೆ ಬೆಳೆ ನಷ್ಟ ಹೊಂದಿದ ರೈತರಿಗೆ ನೀಡಲು ಸೂಚಿಸಲಾಗುವುದು ಎಂದು ಹೇಳಿದರು.

ಶಾಸಕಿ ಶಾರಾದಾ ಪೂರ್ಯನಾಯ್ಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಹೊಳೆಹೊನ್ನುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಣ ಸಿ.ಹನುಮಂತು, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ರವಿಕುಮಾರ್, ರೈತ ನಾಯಕ ಕೆ.ಟಿ.ಗಂಗಾದರ್, ನಗರದ ಮಹಾದೇವಪ್ಪ, ಭೋವಿ ಸಮಾಜದ ಮುಖಂಡರಾದ ಧೀರರಾಜ್ ಹೊನ್ನವಿಲೆ, ವೀರೇಶ್ ಕ್ಯಾತಿನಕೊಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆಗಬೇಕೆಂದು ಅವಿಮುಕ್ತೇಶ್ವರನಿಗೆ ಹರಕೆ
ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ