ಜಿಲ್ಲೆಯಲ್ಲಿ ಮಳೆಯಾರ್ಭಟ: ಮುನ್ನಚ್ಚರಿಕೆ ವಹಿಸಿದ ಡಿಸಿ

KannadaprabhaNewsNetwork | Published : Aug 22, 2024 12:48 AM

ಸಾರಾಂಶ

ಜಿಲ್ಲೆಯಲ್ಲಿ ಮಳೆಯಾರ್ಭಟ: ಮುನ್ನಚ್ಚರಿಕೆ ವಹಿಸಿದ ಡಿಸಿ

ಕನ್ನಡಪ್ರಭ ವಾರ್ತೆ ತುಮಕೂರು ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜಯಮಂಗಲಿ ನದಿ ಪ್ರವಾಹ ಉಂಟು ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜನ ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹ ಉಂಟಾಗಬಹುದಾದ ಜಿಲ್ಲೆಯ ಮಧುಗಿರಿ ತಾಲೂಕು ಕೋಡಗದಾಲ ಗ್ರಾಮ ಪಂಚಾಯತಿ ವ್ಯಾಪ್ತಿ ಚನ್ನಸಾಗರ, ನಂಜಾಪುರ ಗ್ರಾಮಗಳಿಗಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಳೆದ 2 ವರ್ಷಗಳ ಹಿಂದೆ ಭಾರಿ ಮಳೆಯಿಂದ ಉಂಟಾದ ಜಯಮಂಗಲಿ ನದಿ ಪ್ರವಾಹದಿಂದ ಚನ್ನಸಾಗರ ಗ್ರಾಮವು ಸಂಪೂರ್ಣ ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಇದೇ ರೀತಿ ಧಾರಾಕಾರ ಮಳೆ ಮುಂದುವರೆದರೆ ನದಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ ಮಾಡಬೇಕೆಂದು ತಹಸೀಲ್ದಾರ್ ಮಂಜುನಾಥ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುತ್ತುರಾಜ್ ಅವರಿಗೆ ಸೂಚನೆ ನೀಡಿದರು. ಮುಂಜಾಗೃತ ಕ್ರಮವಾಗಿ ಕೋಡಗದಾಲ ಪಂಚಾಯತಿ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಚನ್ನಸಾಗರ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಬೇಕು. ಪ್ರವಾಹ ಮುನ್ಸೂಚನೆ ಕಂಡು ಬಂದ ಕೂಡಲೇ ಸ್ಥಳೀಯ ಅಧಿಕಾರಿಗಳು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತುರ್ತಾಗಿ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು. ತೋಟದ ಮನೆಗಳಲ್ಲಿ ವಾಸಿಸುತ್ತಿರುವವರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಮನವಿ ಮಾಡಿದರಲ್ಲದೆ, ಚನ್ನಸಾಗರ ಗ್ರಾಮದ ರಾಜಗಾಲುವೆಗಳಲ್ಲಿರುವ ಕಸ ಕಡ್ಡಿಗಳನ್ನು ಕೂಡಲೇ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಮುಂದಿನ ೨ ದಿನ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಯಮಂಗಲಿ ನದಿ ನೀರು ಪ್ರವಾಹ ಹೆಚ್ಚಾಗಿ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.

ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ಧನ ಗೌಡ ಮಾತನಾಡಿ, ನಾಗಮ್ಮನ ಪಾಳ್ಯ, ಚನ್ನಸಾಗರ, ನಂಜಾಪುರ ಗ್ರಾಮಗಳಲ್ಲಿ ಒಟ್ಟು 167 ಹಸು, 7 ಎಮ್ಮೆ, 43 ಕುರಿ, 43 ಮೇಕೆ, 15000 ಕೋಳಿ(ಪೌಲ್ಟ್ರಿ ಫಾರಂ)ಗಳಿದ್ದು, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಮಾಲೀಕರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಪ್ರವಾಹ ಹೆಚ್ಚಾದ ನಂತರ ಸುರಕ್ಷಿತ ಕ್ರಮ ಕೈಗೊಳ್ಳುವುದಕ್ಕಿಂತ ಸಂಭವನೀಯ ಪ್ರವಾಹದ ಮುನ್ನವೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಸೂಕ್ತ. ಕಾಳಜಿ ಕೇಂದ್ರದಲ್ಲಿ ಔಷಧಿ, ಆಹಾರ ದಾಸ್ತಾನಿಗೆ ಅಧಿಕಾರಿಗಳನ್ನು ನಿಯೋಜಿಸಿ ಜವಾಬ್ದಾರಿ ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ಸೂಚನೆ ನೀಡಿದರು. ಮಳೆ ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ನೀರನ್ನು ಪರೀಕ್ಷೆಗೊಳಪಡಿಸಬೇಕು ಹಾಗೂ ಕುಡಿಯುವ ನೀರನ್ನು ಕ್ಲೋರಿನೇಷನ್ ಮಾಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದ ಮುನ್ನೆಚ್ಚರಿಕೆ ಮಾಹಿತಿಯನ್ನು ಡಂಗೂರ ಮೂಲಕ ಗ್ರಾಮಸ್ಥರಿಗೆ ತಿಳಿಸಬೇಕು ಹಾಗೂ ಸ್ವಚ್ಛತಾ ವಾಹನಗಳಲ್ಲಿ ಪ್ರಚುರಪಡಿಸಬೇಕು. ಪ್ರವಾಹದ ಮುನ್ನೆಚ್ಚರಿಕಾ ಸಂದೇಶ ಬಂದ ಕೂಡಲೇ ಜನರು ಮನೆಯಿಂದ ಹೊರ ಬಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕು. ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಬೇಕು. ಲೈಫ್ ಜಾಕೆಟ್, ರೋಪ್, ಬೋಟ್, ಮತ್ತಿತರ ಸುರಕ್ಷತಾ ಸಲಕರಣೆಗಳನ್ನು ಸಿದ್ಧವಿಟ್ಟುಕೊಳ್ಳಬೇಕು ಎಂದು ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಗಿರೀಶ್ ಬಾಬು ರೆಡ್ಡಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.ಪ್ರವಾಹ ಉಂಟಾದಲ್ಲಿ ಚೆನ್ನಸಾಗರ ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಶ್ರೀ ಜಯಮಂಗಲಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲು ಹಾಗೂ ಜಯಮಂಗಲಿ ನದಿ ಸುತ್ತ ಮುತ್ತಲಿರುವ ನಾಗಮ್ಮನ ಪಾಳ್ಯ, ಚನ್ನಸಾಗರ, ನಂಜಾಪುರ ಗ್ರಾಮಗಳಲ್ಲಿರುವ ಜನ ಜಾನುವಾರುಗಳ ಪಟ್ಟಿ ಮಾಡಲು ಸೂಚನೆ ನೀಡಲಾಗಿದೆ.

-ಶುಭ ಕಲ್ಯಾಣ್‌, ಜಿಲ್ಲಾಧಿಕಾರಿ.

Share this article