ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ತೊಳೆಸಿದ್ದಾಯ್ತು,. ಇದೀಗ ರಸ್ತೆ ನಿರ್ಮಾಣ ಕಾಮಗಾರಿಗೂ ಮಕ್ಕಳನ್ನು ಕೂಲಿಯಾಳುಗಳಂತೆ ಬಳಸಿಕೊಳ್ಳುವುದನ್ನೂ ನೋಡುವಂತಾಗಿದೆ. ಓದಲು ಬರುವ ಮಕ್ಕಳನ್ನು ಶಿಕ್ಷಕರಾದವರು ಅನ್ಯಕಾರ್ಯಗಳಿಗೆ ದುಡಿಸಿಕೊಳ್ಳುತ್ತಿರುವುದು ದೌರ್ಭಾಗ್ಯದ ಸಂಗತಿ.!ನಾಗಮಂಗಲ ತಾಲೂಕಿನ ನೆಲ್ಕುಂದಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಕೈಯ್ಯಲ್ಲಿ ಬಾಂಡ್ಲಿ, ಗುದ್ದಲಿ ಹಿಡಿದು ಕಲ್ಲು-ಮರಳನ್ನು ಹೊತ್ತು ಹಾಕುವ ಕೆಲಸಕ್ಕೆ ಶಿಕ್ಷಕರು ಬಳಸಿಕೊಂಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ಗ್ರಾಮಸ್ಥರು ಶಿಕ್ಷಕರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಪರೀಕ್ಷೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಮಕ್ಕಳನ್ನು ಓದುವ ಕಡೆ ಆಸಕ್ತಿ ಮೂಡಿಸುವಂತೆ ಮಾಡಬೇಕಾದ ಶಿಕ್ಷಕರು ಅವರ ಕೈಗೆ ಪುಸ್ತಕ-ಪೆನ್ನು ನೀಡುವ ಬದಲು ಬಾಂಡ್ಲಿ, ಗುದ್ದಲಿ ಕೊಟ್ಟು ಕಲ್ಲು-ಮರಳು ಹೊರುವುದಕ್ಕೆ, ಸಿಮೆಂಟ್ ಕಲಸುವ ಕೆಲಸಕ್ಕೆ ನಿಯೋಜಿಸಿರುವುದು ದುರ್ದೈವ. ಮಕ್ಕಳನ್ನು ಹೊರತುಪಡಿಸಿ ಬೇರೆ ಕೂಲಿ ಕೆಲಸದವರು ಶಿಕ್ಷಕರಿಗೆ ಸಿಗಲಿಲ್ಲವೇ ಅಥವಾ ಹಣ ಖರ್ಚಾಗುತ್ತೆ ಅಂತ ಮಕ್ಕಳನ್ನೇ ಕೂಲಿಯಾಳುಗಳನ್ನಾಗಿ ಮಾಡಿದರೇ ಎಂಬುದು ಪ್ರಶ್ನಾರ್ಹವಾಗಿದೆ.ಈ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದರೆ ನಾವೂ ಈ ಕೆಲಸ ಮಾಡುತ್ತಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ನಿಮ್ಮ ಮಕ್ಕಳನ್ನು ಕರೆತಂದು ಈ ಕೆಲಸ ಮಾಡಿಸುವಿರಾ ಎಂಬ ಪ್ರಶ್ನೆಗೆ ಶಿಕ್ಷಕರಿಂದ ಉತ್ತರವಿಲ್ಲ. ಹಳ್ಳಿಯ ಜನರು ತಮ್ಮ ಮಕ್ಕಳು ವಿದ್ಯೆ ಕಲಿಯಲೆಂದು ಶಾಲೆಗೆ ಕಳುಹಿಸುವರೇ ಹೊರತು ಅವರಿಂದ ಗಾರೆ ಕೆಲಸ ಮಾಡಿಸುವುದಕ್ಕಲ್ಲ ಎಂದು ಸ್ಥಳೀಯರು ಶಿಕ್ಷಕರ ವಿರುದ್ಧ ಹರಿಹಾಯ್ದಿದ್ದಾರೆ.
ಮರಳು, ಕಲ್ಲುಗಳನ್ನು ಎತ್ತಿಹಾಕುವ, ಸಿಮೆಂಟ್ ಕಲಸುವ ಕೆಲಸ ಪುಟ್ಟ ಮಕ್ಕಳಿಂದ ಸಾಧ್ಯವಾಗದಿದ್ದರೂ ಮಕ್ಕಳ ಕೈಗೆ ಬಾಂಡ್ಲಿ, ಗುದ್ದಲಿ ಕೊಟ್ಟು ಕೆಲಸ ಮಾಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಹೆಣ್ಣು ಮಕ್ಕಳನ್ನು ಸಿಮೆಂಟ್-ಮರಳು ಕಲಸುವ ಕೆಲಸಕ್ಕೆ, ಗಂಡು ಮಕ್ಕಳನ್ನು ಕಲ್ಲು-ಮರಳು ಎತ್ತಿಹಾಕುವ ಕೆಲಸಕ್ಕೆ ಬಳಸುತ್ತಿರುವುದು ಕಂಡುಬಂದಿತು.
ಶಾಲಾ ಮಕ್ಕಳಿಂದ ಗಾರೆ ಕೆಲಸ ಮಾಡಿಸುತ್ತಿರುವ ಬಗ್ಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಹಿಂದೆಯೇ ಕೆಲಸದಲ್ಲಿ ತೊಡಿಗಿದ್ದ ಎಲ್ಲಾ ಮಕ್ಕಳನ್ನು ಶಿಕ್ಷಕರು ಶಾಲೆಯೊಳಗೆ ಕಳುಹಿಸಿದರು. ಈ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸದಂತೆ ಶಿಕ್ಷಕರು ಅಂಗಲಾಚುತ್ತಿದ್ದುದು ಕಂಡುಬಂದಿತು.ಉದ್ದೇಶಪೂರ್ವಕವಾಗಿ ತಪ್ಪಾಗಿದ್ದರೆ ಕ್ರಮ
ಶಾಲಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮಕ್ಕಳು ಕೆಲಸ ಮಾಡಿದರೆ ತಪ್ಪಲ್ಲ. ಆದರೆ, ಬೇರೆಯವರ ಜಾಗದಲ್ಲಿ ಕೆಲಸ ಮಾಡಿದರೆ ತಪ್ಪಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಉದ್ದೇಶ ಪೂರ್ವಕವಾಗಿ ಶಿಕ್ಷಕರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು.- ಎನ್.ಚಲುವರಾಯಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು.