ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಮಳೆನೀರು

KannadaprabhaNewsNetwork | Published : Aug 22, 2024 1:02 AM

ಸಾರಾಂಶ

ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಳಿಜಾರು ಪ್ರದೇಶದಲ್ಲಿದ್ದ ಹೊನ್ನಾಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಳೆ ನೀರು ನುಗ್ಗಿದೆ. ಐಸಿಯು, ಆಪರೇಷನ್ ಕೊಠಡಿ, ಡಯಾಲಿಸಿಸ್ ಕೇಂದ್ರ ಮತ್ತು ವಾರ್ಡುಗಳಿಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ರಾತ್ರಿ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಪರದಾಡುವ ಸ್ಥಿತಿ ಉಂಟಾಯಿತು.

- ಮಂಗಳವಾರ ರಾತ್ರಿ ಧಾರಾಕಾರ ಮಳೆ ತಂದ ಸಂಕಷ್ಟ । ಐಸಿಯು ರೋಗಿಗಳು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌

- ಐಸಿಯು, ಆಪರೇಷನ್ ಕೊಠಡಿಗಳು, ಡಯಾಲಿಸಿಸ್ ಕೇಂದ್ರ, ವಾರ್ಡುಗಳಿಗೆ ನೀರು । ರೋಗಿಗಳು, ಸಿಬ್ಬಂದಿ ಪರದಾಟ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಳಿಜಾರು ಪ್ರದೇಶದಲ್ಲಿದ್ದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಮಳೆ ನೀರು ನುಗ್ಗಿದೆ. ಐಸಿಯು, ಆಪರೇಷನ್ ಕೊಠಡಿ, ಡಯಾಲಿಸಿಸ್ ಕೇಂದ್ರ ಮತ್ತು ವಾರ್ಡುಗಳಿಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ರಾತ್ರಿ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಪರದಾಡುವ ಸ್ಥಿತಿ ಉಂಟಾಯಿತು.

ಮಳೆ ಬಂದ ಪರಿಣಾಮ ಎತ್ತರ ಪ್ರದೇಶದಲ್ಲಿದ್ದ ತಾಲೂಕು ಕ್ರೀಡಾಂಗಣ, ತುಂಗಭದ್ರಾ ಬಡವಾಣೆ ಹಾಗೂ ಹಲವು ಕಡೆಗಳಿಂದ ಮಳೆನೀರು ರಭಸವಾಗಿ ಹರಿದು ಬಂದಿದೆ. ಏಕಾಏಕಿ ನೀರು ತಗ್ಗು ಪ್ರದೇಶದಲ್ಲಿದ್ದ ಆಸ್ಪತ್ರೆ ಆವರಣಕ್ಕೆ ನುಗ್ಗಿದೆ. ಕ್ರಮೇಣ ವಾರ್ಡ್‌ಗಳು, ಆಪರೇಷನ್ ಕೊಠಡಿ, ಡಯಾಲಿಸಿಸ್ ಕೇಂದ್ರಗಳಲ್ಲಿ ಸಂಪೂರ್ಣ ನೀರು ತುಂಬಿತು. ರೋಗಿಗಳ ಚಿಕಿತ್ಸೆಗೆ ವೈದ್ಯರು, ಸಿಬ್ಬಂದಿ ತೀವ್ರ ತೊಂದರೆ ಅನುಭವಿಸಿದರು.

ಕೂಡಲೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಮಳೆನೀರನ್ನು ಹೊರಹಾಕಲು ಮುಂದಾದರು. ಕರ್ತವ್ಯನಿರತ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ಹಾಗೂ ಐಸಿಯುನಲ್ಲಿದ್ದ ರೋಗಿಗಳನ್ನು ಸುರಕ್ಷಿತ ದೃಷ್ಟಿಯಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಇನ್ನುಳಿದ ನೆಲ ಅಂತಸ್ತಿನ ಎಲ್ಲ ಒಳರೋಗಿಗಳನ್ನು ಮೇಲಂತಸ್ತಿನ ವಾರ್ಡ್‌ಗಳಿಗೆ ಶಿಫ್ಟ್ ಮಾಡಲಾಯಿತು.

ಅಧಿಕಾರಿಗಳು ಆಸ್ಪತ್ರೆಗೆ ದೌಡು:

ಆಸ್ಪತ್ರೆಗೆ ಮಳೆನೀರು ನುಗ್ಗಿದ ವಿಷಯ ತಿಳಿದು ಬುಧವಾರ ಬೆಳಗ್ಗೆ ದಾವಣಗೆರೆ ಡಿಎಚ್‌ಒ ಷಣ್ಮುಖಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್, ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ಮುಖ್ಯಾಧಿಕಾರಿ ಲೀಲಾವತಿ, ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಗಿರೀಶ್ ಸ್ಥಳಕ್ಕೆ ದೌಡಾಯಿಸಿದರು. ಮಳೆನೀರಿನಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು.

ಡಿಎಚ್‌ಒ ಷಣ್ಮುಖಪ್ಪ ಮಾತನಾಡಿ, ಮಂಗಳವಾರ ಧಾರಾಕಾರವಾಗಿ ಸುರಿದ ಮಳೆ ನೀರು ಎತ್ತರ ಪ್ರದೇಶದಿಂದ ಇಳಿಜಾರು ಪ್ರದೇಶದಲ್ಲಿದ್ದ ಆಸ್ಪತ್ರೆಗೆ ನುಗ್ಗಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಳೆನೀರನ್ನು ಹೊರಹಾಕುವಲ್ಲಿ ಶ್ರಮಿಸಿದ್ದಾರೆ. ರೋಗಿಗಳನ್ನು ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಆಸ್ಪತ್ರೆ ಮೇಲಂತಸ್ತಿನ ವಾರ್ಡ್‌ಗಳಿಗೆ ಶಿಫ್ಟ್ ಮಾಡಿದ್ದಾರೆ ಎಂದು ತಿಳಿಸಿದರು.

ಬುಧವಾರ ಮತ್ತೆ ಮಳೆಯಾದರೆ ನೀರು ಆಸ್ಪತ್ರೆ ಆವರಣಕ್ಕೆ ಬರಬಾರದೆಂದು ಆಸ್ಪತ್ರೆಯ ಸಮೀಪ ಸರಾಗವಾಗಿ ನೀರು ಹರಿದುಹೋಗಲು ತಾತ್ಕಾಲಿಕ ಕಾಲುವೆ ನಿರ್ಮಿಸಿದ್ದು, ಮತ್ತೆ ಇದೇ ಸಮಸ್ಯೆ ಎದುರಾಗಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.

ಎಸಿ ಅಭಿಷೇಕ್ ಮಾತನಾಡಿ, ಹಳೇ ಆಸ್ಪತ್ರೆ ಹಿಂಭಾಗದಲ್ಲಿ ₹೧೫ ಕೋಟಿ ವೆಚ್ಚದಲ್ಲಿ ೨೫೦ ಹಾಸಿಗೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಮಳೆನೀರು ಇಲ್ಲಿಂದ ರಭಸವಾಗಿ ಆಸ್ಪತ್ರೆ ಕಾರಿಡಾರ್‌ಗೆ ನುಗ್ಗಿದೆ. ಈಗ ಕಾಮಗಾರಿ ಗುತ್ತಿಗೆದಾರರು ಮತ್ತೊಮ್ಮೆ ಕ್ರಿಯಾಯೋಜನೆ ತಯಾರಿಸಿ, ಇರುವ ಅನುದಾನದಲ್ಲೇ ಅಥವಾ ಹೆಚ್ಚುವರಿ ಅನುದಾನ ಬೇಕಾಗಿದ್ದಲ್ಲಿ ಹೆಚ್ಚುವರಿ ಕ್ರಿಯಾಯೋಜನೆ ತಯಾರಿಸಿ, ಶಾಸಕರ ಗಮನಕ್ಕೆ ತಂದು ಕಾಮಗಾರಿ ಮುಂದುವರಿಸಬೇಕು. ಹಾಗಾದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಎಂಜಿನಿಯರ್ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಸಹಕರಿಸಲು ಮನವಿ:

ಶಸ್ತ್ರಚಿಕಿತ್ಸೆ ಕೊಠಡಿ, ಐ.ಸಿ.ಯು.ಗೆ ಮಳೆನೀರು ನುಗ್ಗಿದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಐಸಿಯು ಘಟಕಗಳನ್ನು ಬಳಕೆ ಮಾಡುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿ ವರದಿ ಕೊಟ್ಟ ನಂತರವೇ ಒ.ಟಿ. ಹಾಗೂ ಐ.ಸಿ.ಯು. ಕೇಂದ್ರಗಳ ಸೇವೆಯನ್ನು ಪುನಃ ಆರಂಭಿಸಲಾಗವುದು. ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಅವೈಜ್ಞಾನಿಕ ಕಾಮಗಾರಿ:

ಮಳೆನೀರು ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಅವಾಂತರ ಸೃಷ್ಠಿಯಾಗಲು ಹಳೇ ಆಸ್ಪತ್ರೆ ಹಿಂಭಾಗದಲ್ಲಿ ನೂತನ 250 ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಿಸುತ್ತಿರುವುದು ಕಾರಣವಾಗಿದೆ. ಭವಿಷ್ಯದಲ್ಲಿಯೂ ಆಸ್ಪತ್ರೆಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗುವ ಸಂದರ್ಭಗಳಿವೆ. ಅಧಿಕಾರಿಗಳು, ಜನಪ್ರಿತಿನಿಧಿಗಳು ಶೀಘ್ರ ಈ ಕುರಿತು ಎಚ್ಚೆತ್ತುಕೊಳ್ಳಬೇಕು. ಬಹುಪಾಲು ಬಡವರೇ ಚಿಕಿತ್ಸೆ ಪಡೆಯುವ ಈ ಸರ್ಕಾರಿ ಆಸ್ಪತ್ರೆ ಕಟ್ಟಡ ವೈಜ್ಞಾನಿಕವಾಗಿ ಹಾಗೂ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಯವಂತೆ ನೋಡಿಕೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಮಳೆ ವಿವರ:

ಹೊನ್ನಾಳಿ- 51 ಮಿಮೀ, ಸವಳಂಗ 40 ಮಿಮೀ, ಬೆಳಗುತ್ತಿ 20 ಮಿಮೀ, ಹರಳಹಳ್ಳಿ 29.2 ಮಿಮೀ, ಗೋವಿನಕೋವಿ 20.4 ಮಿಮೀ, ಕುಂದೂರು 6.2 ಮಿಮೀ, ಸಾಸ್ವೇಹಳ್ಳಿ 10.6. ಮಿಮೀ ಮಳೆಯಾಗಿದೆ. ತುಂಗಭದ್ರಾ ನದಿ ನೀರಿನಮಟ್ಟ 7.200ಕ್ಕೆ ಏರಿಕೆಯಾಗಿದೆ.

- - - -21ಎಚ್.ಎಲ್.ಐ1: ಆಸ್ಪತ್ರೆ ವಾರ್ಡ್‌ಗಳ ಒಳಗೆ ಮಳೆನೀರು ನುಗ್ಗಿರುವುದು.

-21ಎಚ್.ಎಲ್.ಐ1ಎ: ಆಸ್ಪತ್ರೆ ಓ.ಟಿ. ಕೊಠಡಿಗೆ ಹೋಗುವ ದಾರಿಯಲ್ಲಿ ಮಳೆನೀರು ನಿಂತಿರುವುದು.

-21ಎಚ್.ಎಲ್.ಐ1ಬಿ: ಆಸ್ಪತ್ರೆ ಶಸ್ತ್ರಚಿಕಿತ್ಸೆ ಕೊಠಡಿ ಮಳೆನೀರಿನ ಕೆಸರಿನಿಂದ ಕೂಡಿರುವುದು.

-21ಎಚ್.ಎಲ್.ಐ1ಸಿ: ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

-21ಎಚ್.ಎಲ್ಐ1ಡಿ: ಮಳೆನೀರು ಮತ್ತೆ ಆಸ್ಪತ್ರೆಯೊಳಗೆ ನುಗ್ಗದಂತೆ ಆಸ್ಪತ್ರೆ ಹಿಂಭಾಗದಲ್ಲಿ ಜೆ.ಸಿ.ಬಿ.ಯಿಂದ ಕಾಲುವೆ ನಿರ್ಮಿಸಲಾಯಿತು.

Share this article