ಧಾರವಾಡ:
ಬೇರೆ ಬೇರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಏರಿಸಬೇಕೆಂದು ಶಿವಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಆಗ್ರಹಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಾಮಾನ್ಯ ವರ್ಗಕ್ಕೆ 25ರಿಂದ 30ಕ್ಕೆ, ಎಸ್ಸಿ-ಎಸ್ಟಿ ಹಾಗೂ ಒಬಿಸಿಗೆ 27 ರಿಂದ 33ಕ್ಕೆ ಏರಿಸಬೇಕು. ಈಗಾಗಲೇ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಈ ಮೇಲಿನ ರೀತಿಯಲ್ಲಿ ವಯೋಮಿತಿ ಇದೆ. ಈಗಾಗಲೇ ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಸೇರಿ ಯಾವ ನೇಮಕಾತಿಯಾಗುತ್ತಿಲ್ಲ. ಸದ್ಯ 25 ಸಾವಿರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಪದವಿ ಓದಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ನೇಮಕಾತಿಗೆ ಕಾಯ್ದು ಅಭ್ಯರ್ಥಿಗಳು ರೋಸಿಹೋಗಿದ್ದಾರೆ. ಅವರ ವಯೋಮಿತಿ ಮೀರುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಈ ತೀರ್ಮಾನ ಕೈಗೊಳ್ಳಬೇಕು. ಜತೆಗೆ ಈ ವಿಷಯದಲ್ಲಿ ರಾಜ್ಯಪಾಲರನ್ನು ಸೇನೆಯಿಂದ ಭೇಟಿಯಾಗಿ ಸರ್ಕಾರದ ಮೇಲೆ ಒತ್ತಡ ಸಹ ತರಲಾಗುವುದು ಎಂದರು.
ಈ ಬಗ್ಗೆ ಮುಖ್ಯಮಂತ್ರಿ ಗೃಹಮಂತ್ರಿ ಮೇಲೆ, ಗೃಹ ಮಂತ್ರಿ ಮುಖ್ಯಮಂತ್ರಿ ಮೇಲೆ ಹಾಕುತ್ತಿದ್ದು, ಈ ಹಠ ಬಿಟ್ಟು ನೇಮಕಾತಿ ಮಾಡಲು ಗಂಗಾಧರ ಕುಲಕರ್ಣಿ ಆಗ್ರಹಿಸಿದರು. ಜತೆಗೆ ರಾಜ್ಯದಲ್ಲಿ ಅತಿವೃಷ್ಟಿಯಿಂದ ತೀವ್ರ ಬೆಳೆಹಾನಿ, ಜಾನುವಾರು ಪ್ರಾಣ ಹಾನಿ ಹಾಗೂ ಮನೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡಲು ಆಗ್ರಹಿಸಿದರು.ಐ ಲವ್ ಮೊಹಮ್ಮದ ಅಭಿಯಾನ ಬೇಕಿತ್ತಾ?
ಈದ್ ಮಿಲಾದ್ ಸಮಯದಲ್ಲಿ ನಡೆದ ಚಿಕ್ಕ ಘಟನೆಯನ್ನು ಮುಸ್ಲಿಂ ಸಮುದಾಯ ದೊಡ್ಡ ರೀತಿಯಲ್ಲಿ ಬಿಂಬಿಸುತ್ತಿದ್ದು, ಐ ಲವ್ ಮೊಹಮ್ಮದ್ ಅಭಿಯಾನ ಬೇಕಿತ್ತಾ ಎಂದು ಗಂಗಾಧರ ಕುಲಕರ್ಣಿ ಪ್ರಶ್ನಿಸಿದ್ದಾರೆ.ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಮೊಹಮ್ಮದ್ ಜನ್ಮದಿನದಲ್ಲಿ ಮೆರವಣಿಗೆಯಲ್ಲಿ ‘ಐ ಲವ್ ಮೊಹಮ್ಮದ್’ ಎಂಬ ಬರಹ ಇರುವ ನಾಮಫಲಕಕ್ಕೆ ಹಿಂದೂ ಸಮಾಜದ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ದೇಶಾದ್ಯಂತ ಈ ಅಭಿಯಾನ ನಡೆಸಿ ದೇಶದಲ್ಲಿ ಅರಾಜಕತೆ, ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆದಿದೆ. ಇದನ್ನು ಸರ್ಕಾರಗಳು ಸಹ ಗಂಭೀರವಾಗಿ ತೆಗೆದುಕೊಂಡು ಬಂದ್ ಮಾಡಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಶಿವಸೇನಾಕರ್ನಾಟಕದಲ್ಲಿ ಶಿವಸೇನಾ ಸಂಘಟನೆ ಒಂದು ತಿಂಗಳಿಂದ ಕಾರ್ಯೋನ್ಮುಖವಾಗಿದ್ದು, ದೇಶಭಕ್ತಿಯೊಂದಿಗೆ ರಾಜಕೀಯ ಶಕ್ತಿಯಾಗಿಯೂ ಇನ್ಮುಂದೆ ಬೆಳೆಯಲಿದೆ. ಕಲಬುರ್ಗಿಯ ಸಿದ್ದಲಿಂಗ ಸ್ವಾಮೀಜಿ ರಾಜ್ಯಾಧ್ಯಕ್ಷರಾಗಿದ್ದು, ಬೀದರ, ಬಾಗಲಕೋಟ, ಧಾರವಾಡ, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಇನ್ಮುಂದೆ ಘಟಕಗಳು ಶುರುವಾಗಲಿವೆ. ಇನ್ಮುಂದೆ ಶಿವಸೇನೆಯೂ ವಿವಿಧ ಚುನಾವಣೆಗಳಲ್ಲೂ ಸಕ್ರೀಯವಾಗಿ ಭಾಗವಹಿಸಲಿದೆ ಎಂದು ಗಂಗಾಧರಕುಲಕರ್ಣಿ ಪಶ್ನೆಯೊಂದಕ್ಕೆ ಮಾಹಿತಿ ನೀಡಿದರು.