ಕನಕಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸುವ ಜನವಿರೋಧಿ, ರೈತ ವಿರೋಧಿ ನೀತಿಗಳನ್ನು ತಡೆದು, ರೈತರ ಭೂಮಿ ಉಳಿಸಿಕೊಡಲು ರೈತ ಸಂಘಟನೆಗಳು ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಅನು ಕುಮಾರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಮುರುಕಣಿ ಗ್ರಾಮದಲ್ಲಿ ರೈತ ಸಂಘದ ಶಾಖೆಯನ್ನು ಉದ್ಘಾಟನೆ ರೈತ ಮುಖಂಡರಿಗೆ ಸನ್ಮಾನ, ಸಂಘಕ್ಕೆ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತ ಸಂಘದ ಧ್ವನಿ ಕ್ಷೀಣಿಸಿರುವುದರಿಂದ ರೈತರಿಗೆ ಯಾವುದೇ ಕಿಮ್ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಇಲ್ಲ. ಅಲ್ಲದೇ ರೈತರ ಮಾತನ್ನು ಯಾವೊಬ್ಬ ಅಧಿಕಾರಿಯೂ ಯಾವಾಗ ರಾಜಕಾರಣಿಯು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಇದು ರೈತರಿಗೆ ಬಗೆಯುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಆಳುವ ಸರ್ಕಾರಗಳು ಶ್ರೀಮಂತರು ಮತ್ತು ಬಂಡವಾಳ ಶಾಹಿಗಳು ಭೂಮಾಲೀಕರ ಪರವಾದ ಇಚ್ಛಾಸಕ್ತಿಯನ್ನು ಹೊಂದಿ ರೈತರ ಕೃಷಿ ಭೂಮಿಯನ್ನು ಗ್ರೇಟರ್ ಬೆಂಗಳೂರು, ಕರ್ನಾಟಕ ರಾಜ್ಯ ಗೃಹ ಮಂಡಳಿ ಮತ್ತು ವಿಮಾನ ನಿಲ್ದಾಣ ಸ್ಮಾರ್ಟ್ ಸಿಟಿ ಇತ್ಯಾದಿ ಹೆಸರಿನಲ್ಲಿ ಭೂ ಸ್ವಾಧೀನ ಪಡಿಸಿಕೊಂಡು ರೈತರ ಬಾಯಿಗೆ ಮಣ್ಣು ಸುರಿದು ರೈತರನ್ನು ಬರಿಗೈ ದಾಸರನ್ನಾಗಿಸಿ ಬೀದಿ ಪಾಲು ಮಾಡುವ ಹುನ್ನಾರ ನಡೆಸುತ್ತಿವೆ ಎಂದು ಆರೋಪಿಸಿದರು.
ರೈತರ ಅಸ್ಮಿತೆಯಾದ ರೈತ ಸಂಘಟನೆ ಮತ್ತು ದಲಿತ ಪರ ಸಂಘಟನೆಗಳು ಬಲಗೊಳ್ಳದಿದ್ದರೆ ರಾಜಕಾರಣಿಗಳು ರೈತರನ್ನು ಮತ್ತು ದಲಿತರನ್ನು ಒಕ್ಕಲಿಬ್ಬಿಸಿ ಭೂ ಮಾಲೀಕರು ಮತ್ತು ಬಂಡವಾಳ ಶಾಹಿಗಳಿಗೆ ಕೆಂಪು ಭೂ ಮಾಲೀಕರು ಮತ್ತು ಬಂಡವಾಳ ಶಾಹಿಗಳಿಗೆ ಕೆಂಪು ಕಾರ್ಪೆಟ್ ಹಾಸಿ ರೈತ ಮಕ್ಕಳನ್ನು ತಿಥಿ ಮಾಡಿ ಅವರ ಬದುಕನ್ನು ಸರ್ವ ನಾಶ ಮಾಡುತ್ತಾರೆ. ಆದ್ದರಿಂದ ಪಕ್ಷ ಭೇದ, ಜಾತಿ ಧರ್ಮ ಭೇದ ಬಿಟ್ಟು ಎಲ್ಲ ರೈತ ನಾಯಕರು ಭೂಮಿ, ಅಂತರ್ಜಲ ವೃದ್ಧಿಯ ರೈತರ ಹೋರಾಟಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಿವುಗೋಳಿಗೌಡ ಪದಾಧಿಕಾರಿಗಳಾದ ರಾಜೇಶ್ ಬಸವರಾಜು, ದಿಲೀಪ, ರವಿ, ಸುನಿಲ್, ವೀರಭದ್ರೇಗೌಡ, ಶ್ರೀಕಾಂತ, ಸುರೇಶ್, ರಾಜು ಮತ್ತಿತರರು ಹಾಜರಿದ್ದರು.
(ಫೋಟೋ ಕ್ಯಾಫ್ಷನ್)ಕನಕಪುರ ತಾಲೂಕಿನ ಕಸಬಾ ಹೋಬಳಿ ಮುರುಕಣಿ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಶಾಖೆ ಉದ್ಘಾಟನೆ ರೈತ ಮುಖಂಡರ ಸನ್ಮಾನ, ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಸಂಘಟನೆ ಜಿಲ್ಲಾಧ್ಯಕ್ಷ ಅನು ಕುಮಾರ್ ಚಾಲನೆ ನೀಡಿದರು.