ಬಳ್ಳಾರಿ: ಮಕ್ಕಳನ್ನು ದೇಶದ ಭವಿಷ್ಯದ ಶಿಲ್ಪಿಗಳಾಗಿ ಮಾಡುವುದು ಪೋಷಕರು, ಶಿಕ್ಷಕರು ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಹೇಳಿದರು.
ದತ್ತು ಮಾಸಾಚರಣೆ ಪ್ರಯುಕ್ತ ನಗರದ ಕಂಟೋನ್ ಮೆಂಟ್ ನ ಪ್ರದೇಶದ ಶಾಂತಿಧಾಮ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಮತ್ತು ನಾಮಕರಣ ಶಾಸ್ತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜವಾಹರಲಾಲ್ ನೆಹರು ಅವರ ಜನ್ಮದಿನದ ಸವಿನೆನಪಿಗಾಗಿ ನ.14ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ದೇಶದ ಪ್ರತಿ ಮಗುವಿಗೂ ಪ್ರೀತಿ, ಸುರಕ್ಷತೆ, ಶಿಕ್ಷಣ ನೀಡುವುದು ಮಕ್ಕಳ ದಿನಾಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರದೇವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಹೂಗಳಿದ್ದಂತೆ, ಅವುಗಳನ್ನು ಬಾಡದಂತೆ ನೋಡಿಕೊಳ್ಳಬೇಕು. ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಮೂಲ್ಯ ವಿಶೇಷ ದತ್ತು ಸಂಸ್ಥೆಯ ಒಂದು ತಿಂಗಳ ಗಂಡು ಮಗುವಿಗೆ ನಾಮಕರಣ ಶಾಸ್ತ್ರ ಮಾಡಲಾಯಿತು. ನಂತರ ಸರ್ಕಾರಿ ಬಾಲಕರ, ಬಾಲಕಿಯರ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಂಸ್ಥೆಯಲ್ಲಿರುವ ಮಕ್ಕಳಿಗೆ ಕ್ರೀಡಾಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಚಟುವಟಿಕೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಿಸಲಾಯಿತು.
ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ ಸೇವೆ) ದೊಡ್ಡನಗೌಡ ಮಂಜುನಾಥ ನಿರೂಪಿಸಿದರು.