ಡಾ.ಶಿವರಾತ್ರಿ ರಾಜೇಂದ್ರಶ್ರೀಗಳು ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೇವೆ ದೊರೆಯಬೇಕೆಂಬ ಮಹಾದಾಸೆಯನ್ನು ಹೊಂದಿ ನನ್ನಂಥ ಲಕ್ಷಾಂತರ ಮಂದಿಗೆ ಆಶ್ರಯದಾತರಾಗಿದ್ದರು ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್ ಅಭಿಪ್ರಾಯಪಟ್ಟರು. ಚಾಮರಾಕಮಗರದಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೆಯ ಜಯಂತಿ ಮಹೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಮಾಜದ ಅಭ್ಯುದಯಕ್ಕೆ ಡಾ.ಶಿವರಾತ್ರಿ ರಾಜೇಂದ್ರಶ್ರೀಗಳು ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೇವೆ ದೊರೆಯಬೇಕೆಂಬ ಮಹಾದಾಸೆಯನ್ನು ಹೊಂದಿ ನನ್ನಂಥ ಲಕ್ಷಾಂತರ ಮಂದಿಗೆ ಆಶ್ರಯದಾತರಾಗಿದ್ದರು ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್ ಅಭಿಪ್ರಾಯಪಟ್ಟರು. ನಗರದ ಸಮೀಪಲ್ಲಿರುವ ಮರಿಯಾಲ ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಮರಿಯಾಲ ಜೆಎಸ್‌ಎಸ್ ಗ್ರಾಮೀಣ ಇನ್ಯುಬೇಶನ್ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆ ಸಹಯೋಗದಲ್ಲಿ ನಡೆದ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೆಯ ಜಯಂತಿ ಮಹೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜೇಂದ್ರಶ್ರೀಗಳನ್ನು ಬಹಳ ಹತ್ತಿರದಿಂದ ನೋಡಿದವರು ನಾವೆಲ್ಲರು. ಮಾತೃ ಹೃದಯಿಗಳು. ಬಹಳ ಕಷ್ಟಪಟ್ಟು ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಅವರ ದೂರದೃಷ್ಟಿತ್ವ, ಎಲ್ಲರಿಗೂ ಸ್ಪಂದಿಸುವ ಗುಣ ಮಾದರಿಯಾಗಿದೆ. ಹಸಿದವರಿಗೆ ಅನ್ನ ಹಾಕುವ ಪ್ರವೃತ್ತಿಯನ್ನು ಹೊಂದಿದ್ದರು. ೭೦-೮೦ ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಶಿಕ್ಷಣ ಪಡೆವುದು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಶ್ರೀಗಳು ಶಾಲೆಗಳನ್ನು ಆರಂಭಿಸಿದರು. ಜೊತೆಗೆ ವಿದ್ಯಾರ್ಥಿನಿಲಯಗಳನ್ನು ತೆರೆದು ಮಕ್ಕಳು ಹಸಿವಿನಿಂದ ವಿದ್ಯೆ ಕಲಿಯವುದು ಕಷ್ಟ ಎಂಬುದನ್ನು ಅರಿತಿದ್ದರು ಎಂದರು. ಅಂತಃಕರಣದ ಕೊರತೆ ಇಲ್ಲ. ಪ್ರಾಮಾಣಿಕತೆ ಮತ್ತು ಸೇವೆ ಮನೋಭಾವನೆ ಇದ್ದರೆ ಹಣ ತಾನಾಗಿಯೇ ಬರುತ್ತದೆ. ಜನರು ತಾವು ನೀಡುವ ಹಣ ಸದ್ಬಳಕೆಯಾಗುತ್ತದೆ ಎಂಬ ಭಾವನೆ ಬಂದರೆ ಹಣ ನೀಡುವವರು ಬಹಳ ಮಂದಿ ಇದ್ದಾರೆ. ರಾಜೇಂದ್ರ ಶ್ರೀಗಳಿಂದ ಪ್ರೇರಿತನಾಗಿ ದೀನಬಂಧು ಸಂಸ್ಥೆ ಆರಂಭಿಸಿ, ೪೦೦ ಮಕ್ಕಳಿಗೆ ಉಚಿತ ಶಿಕ್ಷಣ ವಸತಿ ಸೌಲಭ್ಯ ಕೊಡುತ್ತಿದ್ದೇವೆ. ನಮ್ಮ ಸೇವೆಯನ್ನು ನೋಡಿ, ದಾನಿಗಳು ಮುಂದೆ ಬರುತ್ತಿದ್ದಾರೆ. ಲಕ್ಷ ಲಕ್ಷ ಹಣ ನೀಡುವವರು ಇದ್ದಾರೆ. ಅದು ಸದ್ಬಳಕೆಯಾಗುತ್ತಿದೆ. ಅಂಥ ಪ್ರೀತಿ ಹಂಚುವ ಹೃದಯಗಳು ಸಮಾಜದಲ್ಲಿ ಇದ್ದಾರೆ ಎಂದು ಜಯದೇವ್ ಅವರು ತಿಳಿಸಿದರು. ನಂಜನಗೂಡಿನ ಯೋಗ ಶಿಕ್ಷಕ ಉಡಿಗಾಲ ಜಿ.ಪ್ರಕಾಶ್ ನುಡಿಮನ ಸಲ್ಲಿಸಿ, ಮಾತನಾಡಿ, ರಾಜೇಂದ್ರಶ್ರೀಗಳು ಎಲ್ಲರಿಗೂ ಶಿಕ್ಷಣ ಕೊಡಬೇಕೆಂಬ ಆಶಯ ವಿದ್ಯಾರ್ಥಿಗಳಿಗೆ ದಾಸೋಹ ಕಲ್ಪಿಸಿದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜೇಂದ್ರಶ್ರೀಗಳ ಸೇವೆಯಿಂದ ಮಹಾಪುರುಷರಾಗಿದ್ದಾರೆ. ಅವರು ತಾವು ಪಾಂಡಿತ್ಯ ಪಡೆದು ಬಂದರೆ ಸಾಲದು, ಇಲ್ಲಿರುವ ಎಲ್ಲರು ಶಿಕ್ಷಣ ಪಡೆಯುವಂತಾಗಬೇಕು ಎಂದು ಕಾಶಿಯಿಂದ ಸಂಕಲ್ಪ ಮಾಡಿಕೊಂಡು ಮೈಸೂರಿಗೆ ಬಂದು ಬಹು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಸೇವೆಯನ್ನು ಎಲ್ಲರು ಸ್ಮರಿಸಿಕೊಳ್ಳುವ ಜೊತೆಗೆ ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಬದನಗುಪ್ಪೆ ಗ್ರಾಪಂ ಅಧ್ಯಕ್ಷ ಎಂ.ಕುಮಾರ್ ಅವರು ರಾಜೇಂದ್ರಶ್ರೀ ಸಾಧನೆ ಕುರಿತು ಮಾತನಾಡಿದರು. ಕಳೆದ ಸಾಲಿನಲ್ಲಿ ಐಟಿಐ ತರಬೇತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೆಎಸ್‌ಎಸ್ ಆರ್‌ಐಎಸ್‌ಡಿಸಿನ ಸಂಯೋಜಕ ಬಿ.ಎಂ.ಚಂದ್ರಶೇಖರ್, ಕೈಗಾರಿಕಾ ತರಬೇತಿ ಕೇಂದ್ರ ಪ್ರಾಂಶುಪಾಲ ವೈ.ಎಂ.ರವಿಚಂದ್ರ ಉಪಸ್ಥಿತರಿದ್ದರು. ಅಧೀಕ್ಷಕ ಎನ್.ಮಹದೇವಸ್ವಾಮಿ ನಿರೂಪಿಸಿದರು, ಕಿರಿಯ ತರಬೇತಿ ಅಧಿಕಾರಿ ಆರ್. ಮಂಜುನಾಥ್, ಸದಾಶಿವಮೂರ್ತಿ, ಸಹ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.