ಕನ್ನಡಪ್ರಭ ವಾರ್ತೆ ಮೈಸೂರು
ಬಾಲರಾಮನನ್ನು ಕೆತ್ತಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಶುಕ್ರವಾರ ನಗರದ ಸರಸ್ವತಿಪುರಂನಲ್ಲಿ ಅಭಿನಂದಿಸಲಾಯಿತು.ಶಂಕರ ಜಯಂತಿ ಸಭಾ ಹಾಗೂ ಸರಸ್ವತಿಪುರಂ ಕನ್ನಡ ಗೆಳೆಯರ ಬಳಗದ ವತಿಯಿಂದ ತೆಂಗಿನತೋಪು ರಾಮಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ್ ಅವರು ಯೋಗಿರಾಜ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಯದುವೀರ್, ನಾನು ನಿಮ್ಮೆಲ್ಲರ ಋಣ ತೀರಿಸಬೇಕಿದೆ. ಅದಕ್ಕಾಗಿ ಅವಕಾಶ ಮಾಡಿಕೊಡಿ. ಮೈಸೂರು ಅರಸರು ಕನ್ನಡ ಭಾಷೆ ಉಳಿಸುವ ಜೊತೆಗೆ ಈ ನಾಡಿನ ಪರಂಪರೆ ಉಳಿಸಿದ್ದರು. ಅದೇ ರೀತಿ ಮೋದಿ ಅವರು ಕೂಡ ಮೂಲ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಪೀಳಿಗೆಗೆ ಒಳ್ಳೆಯ ದೇಶವನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ಐದು ಶತಮಾನಗಳ ಹೋರಾಟಕ್ಕೆ ಈಗ ಸುದಿನ. ರಾಮಲಲ್ಲಾ ವಿಗ್ರಹ ಕೆತ್ತನೆಯ ಅವಕಾಶವೂ ಮೈಸೂರಿನ ಶಿಲ್ಪಗೆ ದೊರೆತದ್ದು ಅಭಿನಂದನಾರ್ಹ. ಸರಸ್ವತಿಪುರಂ ಬಡಾವಣೆ ರಚೆನೆಗೂ ಮೈಸೂರು ಅರಸರೆ ಕಾರಣ. ಮೈಸೂರಿನಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲದಂತಾಗಿರುವುದು ಯದುವಂಶವೇ ಕಾರಣ. ಹಾಡು ಮುಟ್ಟದ ಸೋಪ್ಪಿಲ್ಲ ಎಂಬಂತೆ ಮೈಸೂರು ಒಡೆಯರು ಸೇವಾ ಕಾರ್ಯ ಮಾಡಿದ್ದಾರೆ ಎಂದರು.
ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮನ ವಿಗ್ರಹಕ್ಕಾಗಿ ಕೆಲಸ ಮಾಡಿದೆ. ಅಲ್ಲಿಂದ ಬಂದ ಕೂಡಲೇ ಮೊದಲು ಭೇಟಿ ಮಾಡಿದ್ದು ಮೈಸೂರು ಮಹಾರಾಜರನ್ನೇ. ನಮ್ಮ ಕುಟುಂಬಕ್ಕೆ ಆಶ್ರಯ ನೀಡಿ, ಕಲೆಯನ್ನು ಪ್ರೋತ್ಸಾಹ ನೀಡಿದ್ದಾರೆ ಎಂದರು.ಮಾಜಿ ಮೇಯರ್ ಆರ್. ಲಿಂಗಪ್ಪ ಮಾತನಾಡಿದರು. ಮೇಲುಕೋಟೆ ವೆಂಗಿಪುರ ನಂಬಿಮಠದ ಶ್ರೀ ಇಳೈ ಆಳ್ವಾರ್‌ಸ್ವಾಮೀಜಿ, ನಗರ ಪಾಲಿಕೆ ಮಾಜಿ ಸದಸ್ಯೆ ಸಿ. ವೇದಾವತಿ ಮೊದಲಾದವರು ಇದ್ದರು.