ರಾಮಲಿಂಗಾರೆಡ್ಡಿಗೆ ಮತ್ತೊಮ್ಮೆ ಉಸ್ತುವಾರಿ ಹೊಣೆಗಾರಿಕೆ

KannadaprabhaNewsNetwork |  
Published : Jun 26, 2026, 01:15 AM IST
25ಕೆಆರ್  ಎಂಎನ್  8.ಜೆಪಿಜಿಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ | Kannada Prabha

ಸಾರಾಂಶ

ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ರಾಜಕೀಯ ಕರ್ಮಭೂಮಿಯಾಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆಗಾರಿಕೆಯನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೆಗಲಿಗೆ ಮತ್ತೊಮ್ಮೆ ವಹಿಸಿರುವುದು ಅಚ್ಚರ ಮೂಡಿಸಿದೆ

ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ರಾಜಕೀಯ ಕರ್ಮಭೂಮಿಯಾಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆಗಾರಿಕೆಯನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೆಗಲಿಗೆ ಮತ್ತೊಮ್ಮೆ ವಹಿಸಿರುವುದು ಅಚ್ಚರ ಮೂಡಿಸಿದೆ.

ಮುಖ್ಯಮಂತ್ರಿಗಳಾದವರು ತಮ್ಮ ತವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದು ಸಾಮಾನ್ಯ. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ರಾಮಲಿಂಗಾರೆಡ್ಡಿ ಅವರಿಗೆ ಎರಡನೇ ಬಾರಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಿದ್ದಾರೆ.

ಕನಕಪುರ (ಸಾತನೂರು - 3ಬಾರಿ) ಕ್ಷೇತ್ರದಿಂದ 8ನೇ ಬಾರಿ ಗೆದ್ದು ಕಾಂಗ್ರಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾಗ ಮತ್ತು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಮೇಲಾದರು ಡಿ.ಕೆ.ಶಿವಕುಮಾರ್ ಅವರೇ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆಂದು ಎಲ್ಲರು ಭಾವಿಸಿದ್ದರು. ರೆಡ್ಡಿರವರು ಬೇರೊಂದು ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಾರೆ ಎನ್ನಲಾಗಿತ್ತು.

ಬಾಲಕೃಷ್ಣ ಸಚಿವರಾದರೆ ಉಸ್ತುವಾರಿ ಬದಲಾವಣೆ :

ಆದರೀಗ ಡಿ.ಕೆ.ಶಿವಕುಮಾರ್ ರವರು ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಮಾತ್ರವಲ್ಲದೆ ಪಕ್ಕದ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದ ಪಟ್ಟವನ್ನೂ ಕಟ್ಟಿದ್ದಾರೆ. ರೆಡ್ಡಿರವರು ಡಿಕೆ ಸಹೋದರರೊಂದಿಗೆ ಉತ್ತಮ ಒಡನಾಟವನ್ನೇ ಹೊಂದಿದ್ದಾರೆ. ಆದರೂ ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಿಗದ ಕಾರಣ ಮುನಿಸಿಕೊಂಡ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕೊನೆಗೆ ಡಿಕೆಶಿ ಅವರೇ ರೆಡ್ಡಿ ಅವರನ್ನು ಖುದ್ಧಾಗಿ ಭೇಟಿಯಾಗಿ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡಿದ್ದರು.

ಈಗ ಎರಡು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಸಂಪುಟ ಪುನರ್ ರಚನೆಯಾಗಿ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಕ್ಕಿದರೆ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಅವರ ಪಾಲಾಗುವ ಸಾಧ್ಯತೆಗಳಿವೆ.

ಈಗ ಬೆಂಗಳೂರು ಮಹಾನಗರ ಪಾಲಿಕೆ, ವಿಧಾನ ಪರಿಷತ್ , ಗ್ರಾಪಂ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆಗಳು ಎದುರಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಗಳ ಹಂಚಿಕೆ ನಡೆದಿದೆ ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್​ ಅಧಿಕಾರ ವಹಿಸಿಕೊಂಡ ನಂತರ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಇದೀಗ ಎಲ್ಲಾ ನೂತನ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದೆ. ಪ್ರತಿ ಸಚಿವರು ನೇಮಕಗೊಂಡ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳನ್ನು ನೇರವಾಗಿ ಮೇಲ್ವಿಚಾರಣೆ ಮಾಡಬೇಕಿದೆ.

ಹೊರಗಿನವರ ಹೆಗಲಿಗೆ ಉಸ್ತುವಾರಿ ಹೊರೆ :

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 2007ರಲ್ಲಿ ರಾಮನಗರ ಜಿಲ್ಲೆಯನ್ನು ರಚಿಸಿದರು. ಆಗ ಆಯಕಟ್ಟಿನ ಡಬಲ್ ಖಾತೆಗಳ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರಿಗೆ ಹಾಸನದ ಜತೆಗೆ ರಾಮನಗರದ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.

ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಮೊದಲಿಗೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಬೆಂಗಳೂರು ಜತೆಗೆ ರಾಮನಗರದ ಹೆಚ್ಚುವರಿ ಹೊಣೆ ವಹಿಸಿಕೊಂಡರು. ನಂತರದಲ್ಲಿ ಉಮೇಶ್ ಕತ್ತಿ, ಬಿ.ಶ್ರೀರಾಮುಲು ಹಾಗೂ ಬಿ.ಎನ್.ಬಚ್ಚೇಗೌಡ ರಾಮನಗರದಲ್ಲಿ ಉಸ್ತುವಾರಿ ಸಚಿವರಾಗಿ ದರ್ಬಾರ್ ನಡೆಸಿದ್ದರು.

ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದಗೌಡ ಅಧಿಕಾರಾದಲ್ಲಿದ್ದಾಗ ಜಿಲ್ಲೆಯವರೇ ಆದ ಸಿ.ಪಿ.ಯೋಗೇಶ್ವರ್ ಇಲ್ಲಿನ ಉಸ್ತುವಾರಿ ಸಚಿವರಾದರು. ಇವರೇ ರಾಮನಗರ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಮೊಟ್ಟ ಮೊದಲ ಸ್ಥಳೀಯ ಸಚಿವ ಎನಿಸಿಕೊಂಡಿದ್ದರು.

ಸದಾನಂದಗೌಡ ಪದತ್ಯಾಗದ ಬಳಿಕ ಸಿಎಂ ಹುದ್ದೆಗೇರಿದ ಜಗದೀಶ್ ಶೆಟ್ಟರ್ ಉಸ್ತುವಾರಿಗಳನ್ನು ಬದಲಿಸಿದರು. ಯೋಗೇಶ್ವರ್ ಅವರನ್ನು ನೆರೆಯ ಮಂಡ್ಯಕ್ಕೆ ಎತ್ತಂಗಡಿ ಮಾಡಿ, ಈ ಜಿಲ್ಲೆಗೆ ಹೊನ್ನಾಳಿಯವರಾದ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಪ್ರತಿಷ್ಠಾಪಿಸಿದ್ದರು.

ಡಿಕೆಶಿ ಬದಲು ಬೇರೊಬ್ಬರಿಗೆ ಸಾರಥ್ಯ:

ಕಾಂಗ್ರೆಸ್ ಅಕಾರದಲ್ಲಿ ಇದ್ದಾಗ ಡಿಕೆಶಿ ಬದಲಿಗೆ ಬೇರೊಬ್ಬರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೊಣೆಗಾರಿಕೆ ನೀಡಿರುವುದು 3ನೇ ಬಾರಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಿದ್ದಾಗ ಎಸ್.ಎಂ.ಕೃಷ್ಣರವರ ಸಚಿವ ಸಂಪುಟದಲ್ಲಿ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

2013ರಲ್ಲಿ ಸಿದ್ದರಾಮಯ್ಯರವರ ಸರ್ಕಾರದಲ್ಲಿ ಒಂದು ವರ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆ ಸಮಯದಲ್ಲಿ ಕೃಷ್ಣಬೈರೇಗೌಡ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸಿದ್ದರು. ಆನಂತರ ಇಂಧನ ಸಚಿವರಾದ ಡಿಕೆಶಿ ಜಿಲ್ಲಾ ಉಸ್ತುವಾರಿ ಸಚಿವರಾದರು. 2018ರಲ್ಲಿ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ನೀರಾವರಿ ಸಚಿವರಾಗುವುದರ ಜೊತೆಗೆ ಉಸ್ತುವಾರಿ ಹೊಣೆಯನ್ನು ಹೊತ್ತಿದ್ದರು.

2019 ರಿಂದ 2021ರಲ್ಲಿ ಯಡಿಯೂರಪ್ಪ ಹಾಗೂ 2021-23ರವರೆಗೆ ಬಸವರಾಜಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಯಲ್ಲಿ ಮಾಗಡಿ ಮೂಲದವರಾದ ಡಾ.ಸಿ.ಎನ್ .ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬೆಂಗಳೂರು ದಕ್ಷಿಣ ಉಸ್ತುವಾರಿ ಹೊಣೆ ಎರಡನೇ ಬಾರಿಗೆ ಅನುಭವಿ ರಾಜಕಾರಣಿಯಾಗಿರುವ ರಾಮಲಿಂಗಾರೆಡ್ಡಿ ಹೆಗಲಿಗೆ ಬಿದ್ದಿದೆ.

ಬಾಕ್ಸ್ .....................

ಹೊರಗಿನವರ ಸಾಧನೆ ಏನು ಇಲ್ಲ:

ಈ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ , ಸಿ.ಪಿ.ಯೋಗೇಶ್ವರ್ ಹಾಗೂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಹೊರತು ಪಡಿಸಿ ಬೇರೆಯವರು ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಲೇ ಇಲ್ಲ.

ಜಿಲ್ಲೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಮಸ್ಯೆ ಬಗೆಹರಿಸಿ, ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದರಲ್ಲಿ ಉಸ್ತುವಾರಿ ಸಚಿವರೇ ಬದಲಾವಣೆಯಾದ ಉದಾಹರಣೆಗಳು ಇದೆ. ಆಗೊಂದು ಹೀಗೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳ ತಲೆ ಎಣಿಸಿದ್ದೇ ಉಸ್ತುವಾರಿ ಸಚಿವರ ಸಾಧನೆಯಾಗಿತ್ತು. ಯೋಗೇಶ್ವರ್ ತಮ್ಮ ಅವಧಿಯಲ್ಲಿ ಒಂದಿಷ್ಟು ಯೋಜನೆಗಳನ್ನು ಚನ್ನಪಟ್ಟಣಕ್ಕೆ ಸೀಮಿತವಾಗಿ ಮಂಜೂರು ಮಾಡಿಸಿಕೊಂಡರು. ಡಿ.ಕೆ.ಶಿವಕುಮಾರ್ ಹಾಗೂ ಡಾ.ಸಿ.ಎನ್.ಅಶ್ವತ್ಥ ನಾರಾಯಣರವರು ಅಭಿವೃದ್ಧಿ ವಿಚಾರದಲ್ಲಿ ಇಡೀ ಜಿಲ್ಲೆಗೆ ನ್ಯಾಯ ಕೊಡಿಸಿದರು.ಹೊರಗಿನ ಉಸ್ತುವಾರಿಗಳು ಈ ಜಿಲ್ಲೆಯ ಉಸಾಬರಿ ಬಗ್ಗೆ ಉತ್ಸಾಹವನ್ನೇ ತೋರಲಿಲ್ಲ. ಎಲ್ಲ ಹಂತದಲ್ಲೂ ಅವರು ಹೊರೆ ಎನಿಸಿಕೊಂಡರಷ್ಟೇ.

ಬಾಕ್ಸ್ .....................

ಈಡೇರುವುದೇ ಜಿಲ್ಲೆಯ ಜನರ ನಿರೀಕ್ಷೆಗಳು ?

* ಬಿಡದಿ ಟೌನ್ ಶಿಪ್ ಯೋಜನೆ ಕುರಿತು ರಾಜ್ಯಸರ್ಕಾರ ಮತ್ತು ವಿಪಕ್ಷಗಳು, ರೈತರ ಹೋರಾಟ ತಾರಕಕ್ಕೇರಿದೆ. ಹೋರಾಟಗಾರರ ಮನವೊಲಿಸಿ ಯೋಜನೆ ಕಾರ್ಯಗತಗೊಳಿಸುವ ಕಠಿಣ ಸವಾಲು ಮುಂದಿದೆ.

* ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ.

* ರಾಮನಗರದಲ್ಲಿನ ಸೂಪರ್ ಸ್ಪೆಷಾಲಿಟಿ ಜಿಲ್ಲಾಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಒದಗಿಸುವುದು, ಹಳೇಯ ಜಿಲ್ಲಾಸ್ಪತ್ರೆಯನ್ನು ತಾಯಿ ಮಗುವಿನ ಆಸ್ಪತ್ರೆಯನ್ನಾಗಿ ಮಾರ್ಪಡಿಸುವುದು. ಸುಸಜ್ಜಿತವಾದ ಒಳ ಮತ್ತು ಹೊರ ಕ್ರೀಡಾಂಗಣ ನಿರ್ಮಾಣ.

* ರಾಮನಗರದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ಸುಸಜ್ಜಿತ ಬಸ್ ನಿಲ್ದಾಣ ಸ್ಥಾಪನೆ. ಆರ್ಥಿಕತೆಯ ದೃಷಿಯಿಂದ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯನ್ನು ಸುಸಜ್ಜಿತ ಮಾರುಕಟ್ಟೆ(ಕೆ.ಆರ್.ಮಾರ್ಕಟ್ ರೀತಿಯಲ್ಲಿ) ನಿರ್ಮಾಣ ಮಾಡಿ ಉಳಿಸಿಕೊಳ್ಳುವುದು.

* ಕಾವೇರಿ ನದಿಗೆ ಮೇಕೆದಾಟು ಬಳಿ ಅಡ್ಡಲಾಗಿ ಜಲಾಶಯ ನಿರ್ಮಾಣ, ಸತ್ತೇಗಾಲ ನೀರಾವರಿ ಯೋಜನೆಗೆ ವೇಗ ನೀಡುವುದು. ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದು.

*ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕೆ ಪ್ರದೇಶ ಸಾಕಷ್ಟು ಅಭಿವೃದ್ದಿ ಕಾಣುತ್ತಿದ್ದು ಸಾರಿಗೆ ಒತ್ತಡ ಕಡಿಮೆ ಮಾಡಲು ಕೆಂಗೇರಿಯಿಂದ ಮೆಟ್ರೋ ರೈಲು ವಿಸ್ತರಣೆ ಮಾಡಬೇಕಿದೆ.

*ಬೆಂಗಳೂರಿನಿಂದ ಕನಕಪುರ - ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಕೊಯಮತ್ತೂರಿಗೆ ರೇಲ್ವೆ ಸಂಪರ್ಕ ಕಲ್ಪಿಸುವುದು.

* ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ.

*ವಂದಾರಗುಪ್ಪೆ ಬಳಿ ರೇಷ್ಮೆಗೂಡಿನ ಹೈಟೆಕ್ ಮಾರುಕಟ್ಟೆ ಹಾಗೂ ಬೈರಾಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕವನ್ನು ತ್ವರಿಗತಿಯಲ್ಲಿ ನಿರ್ಮಾಣ ಮಾಡುವುದು.

*ನಾಡಪ್ರಭು ಕೆಂಪೇಗೌಡರ ಸಮಾ ಇರುವ ಕೆಂಪಾಪುರ ಗ್ರಾಮ, ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಹಾಗೂ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರಾದ ಬಾನಂದೂರು ಗ್ರಾಮಗಳ ಅಭಿವೃದ್ಧಿ ಪಡಿಸುವುದು.

* ಪ್ರವಾಸೋಮದ್ಯಮಕ್ಕೆ ಸಾಕಷ್ಟು ಅವಕಾಶವಿದ್ದು ಸಂಗಮ -ಮೇಕೆದಾಟು ಅಭಿವೃದ್ದಿ, ಚುಂಚಿಫಾಲ್ಸ್ , ಮಾವತ್ತೂರು ಕೆರೆ ಅಭಿವೃದ್ಧಿ, ಕಣ್ವ ಜಲಾಶಯದಲ್ಲಿ ಚಿಲ್ಡ್ರನ್ ಪಾರ್ಕ್ ಸ್ಥಾಪನೆ, ಮಂಚನಬೆಲೆ ಜಲಾಶಯ ಬಳಿ ಉದ್ಯಾನವನ ನಿರ್ಮಾಣ, ಟ್ರಕ್ಕಿಂಗ್ ಗೆ ಹೆಸರಾದ ಬೆಳಿಕಲ್ ಬೆಟ್ಟ, ಅಚ್ಚಲು ಬೆಟ್ಟ, ಕಬ್ಬಾಳ್ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವುದು.

25ಕೆಆರ್ ಎಂಎನ್ 8.ಜೆಪಿಜಿ

ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಎಸ್‌ಟಿ ಅಧಿಕಾರಿಗಳ ದಾಳಿಯಿಂದ ವ್ಯಾಪಾರ ವಾತಾವರಣಕ್ಕೆ ಧಕ್ಕೆ
ಎಸ್‌ಐಆರ್‌ ಪ್ರಕ್ರಿಯೆಗೆ ಎಲ್ಲರೂ ಕೈಜೋಡಿಸಿ ಎಂದ ಸಂತೋಷ್‌